ತುಮಕೂರು: ಡ್ರಗ್ಸ್ ಚಟಕ್ಕೆ ಬಿದ್ದು ಹಾಳಾದ ಮಗನಿಗಾಗಿ ತಾಯಿ ಕಣ್ಣೀರು ಹಾಕಿ, ಈತನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ಕೊಡಿ ಎಂದು ಅಳಲು ತೋಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ತುಮಕೂರು (Tumakuru) ಜಿಲ್ಲೆ ತುರುವೇಕೆರೆ (Turuvekere)ಯಲ್ಲಿ ನಡೆದಿದೆ. ಪಟ್ಟಣದಲ್ಲಿ ಸಣ್ಣ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ರೇಣುಕಮ್ಮ ಎಂಬ ಮಹಿಳೆಯ 20 ವರ್ಷ ವಯಸ್ಸಿನ ಮಗ ಅಭಿ ಎಂಬಾತನಿಂದ ಕಣ್ಣೀರು ಸುರಿಸಿದ್ದಾರೆ. ಸ್ನೇಹಿತರ ಸಹವಾಸಕ್ಕೆ ಬಿದ್ದು ಅಭಿ, ಡ್ರಗ್ಸ್ ದಾಸನಾಗಿದ್ದಾನೆ. ಚಟಗಳಿಂದ ಮುಕ್ತಗೊಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ.
ಆದರೂ ಪ್ರಯೋಜನವಾಗಿಲ್ಲ. ಪಟ್ಟಣದಲ್ಲಿ ಗಾಂಜಾ ಸೇರಿದಂತೆ ಹಲವಾರು ಮಾದಕ ವಸ್ತುಗಳು ಮಾರಾಟವಾಗುತ್ತಿವೆ. ಇದು ಯುವಕರನ್ನು ಹಾಳು ಮಾಡುತ್ತಿದೆ. ನನ್ನ ಮಗನೂ ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾನೆ. ಹೀಗೆ ಪಟ್ಟಣದಲ್ಲಿ ಸಾಕಷ್ಟು ಯುವಕರಿದ್ದಾರೆ. ಹೀಗಾಗಿ ಪೊಲೀಸರು ಎಚ್ಚೆತ್ತುಕೊಳ್ಳಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ.
ಡ್ರಗ್ಸ್ ಸೇವಿಸಿ ಯುವಕ ಮಹಿಳೆಯರನ್ನು ಚುಡಾಯಿಸಿ ಥಳಿಸಿಕೊಂಡು ಬರುತ್ತಾನೆ. ಮನೆಗೆ ಬಂದು ಜನ ಬೈದು ಹೋಗ್ತಾರೆ. ಹೀಗಾಗಿ ಅವನನ್ನು ಜೈಲಿಗೆ ಹಾಕಿ, ಇಲ್ಲವೇ ಸಾಯಿಸಲು ಅನುಮತಿ ನೀಡಿ ಎಂದು ತಾಯಿ ಕಣ್ಣೀರು ಸುರಿಸಿದ್ದಾರೆ.








