ರೇಣುಕಾಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ಹಲವು ಸಂಕಷ್ಟಗಳು ಎದುರಾಗಿವೆ. ಈಗ ಹಳೆಯ ಪ್ರಕರಣವೊಂದಕ್ಕೆ ಜೀವ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದರ್ಶನ್ ನ ಮಾಜಿ ಮ್ಯಾನೇಜರ್ ಮಲ್ಲಿ ಕುರಿತು ಹುಡುಕಾಟ ಆರಂಭವಾಗಿದೆ. ಮಲ್ಲಿ ತಾನು ಜೀವಂತ ಇರುವುದಾಗಿಯೂ ಸಾಲಗಳಿಂದಾಗಿ ಕಷ್ಟದಲ್ಲಿದ್ದು, ಸಾಲ ಮರುಪಾವತಿಗೆ ಬೇಕಾದ ಹಣ ಗಳಿಸಿಯೇ ಬರುತ್ತೇನೆ ಎಂದು ಪತ್ನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾಗಿ ವರದಿಯಾಗಿದೆ. ಸದ್ಯ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದ್ದು, ಆ ಪ್ರಕರಣದ ಮರು ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶ್ರೀಧರ್ ಎಂಬುವವರು ಎಪ್ರಿಲ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಷಯ ಇದೀಗ ಮಹತ್ವ ಪಡೆದುಕೊಂಡಿದ್ದು, ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಂದು ವರ್ಷ ಕೆಲಸ ಮಾಡಿದ್ದ ಶ್ರೀಧರ್ ಎಂಬುವರು ಕಳೆದ ಏಪ್ರಿಲ್ 17 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಮೃತದೇಹ ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿರುವ ದರ್ಶನ್ ಗೆ ಸೇರಿದ್ದ ಫಾರ್ಮ್ ಹೌಸ್ ನಲ್ಲಿ ಪತ್ತೆಯಾಗಿತ್ತು. ಆ ಫಾರ್ಮ್ ಹೌಸ್ ನ ಉಸ್ತುವಾರಿಯನ್ನು ಶ್ರೀಧರ್ ನೋಡಿಕೊಳ್ಳುತ್ತಿದ್ದರು. ಆದರೆ, ಅದೇ ಫಾರ್ಮ್ ಹೌಸ್ ನಲ್ಲಿ ಮೃತದೇಹ ಪತ್ತೆಯಾಗಿತ್ತು.
ಆತ್ಮಹತ್ಯೆಗೆ ಶರಣಾಗಿದ್ದ ಶ್ರೀಧರ್ ಡೆತ್ ನೋಟ್ ಕೂಡ ಪತ್ತೆಯಾಗಿತ್ತು. ‘ನನ್ನ ಸಾವಿಗೆ ನಾನೇ ಕಾರಣ, ಒಂಟಿತನ ಕಾಡುತ್ತಿದೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶ್ರೀಧರ್ ಬರೆದುಕೊಂಡಿದ್ದ. ಅನೆಕಲ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಅವರ ಹಳೆಯ ಪ್ರಕರಣಗಳನ್ನು ಸಹ ಪೊಲೀಸರು ಜಾಲಾಡುತ್ತಿದ್ದು, ಶ್ರೀಧರ್ ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.