ಹೈದರಾಬಾದ್: ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು, ಅದನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆ ಹಾಕುತ್ತಿದ್ದರು ಎಂದು ಪೋಷಕರಿಗೆ ಸಂದೇಶ ಕಳುಹಿಸಿ 17 ವರ್ಷದ ಬಾಲಕಿ ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿ ವಿಶಾಖಪಟ್ಟಣಂನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದು, ಕುಟುಂಬವು ನೆರೆಯ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನೆಲೆಸಿದೆ ಎಂದು ತಿಳಿದು ಬಂದಿದೆ. ಸಂದೇಶದಲ್ಲಿ ಬಾಲಕಿ, ನಾನು ಕಾಲೇಜಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಅದನ್ನು ಫೋಟೋ ತೆಗೆದುಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸಂಸ್ಥೆಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಲು ಆಗಿಲ್ಲ ಎಂದು ತಿಳಿಸಿದ್ದಾಳೆ.
ಕಾಲೇಜಿನಲ್ಲಿ ಕೆಲ ಸಹ ವಿದ್ಯಾರ್ಥಿನಿಯರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾಳೆ. ಅಕ್ಕನನ್ನು ಉದ್ದೇಶಿಸಿ, ಕ್ಷಮಿಸಿ ದೀದಿ, ನಾನು ಹೋಗಬೇಕು ಎಂದು ಭಾವುಕವಾಗಿ ಬರೆದಿದ್ದಾಳೆ. ಟೆನ್ಶನ್ ಆಗಬೇಡಿ, ನನ್ನ ಮಾತು ಕೇಳಿ, ನಾನು ಯಾಕೆ ಹೋಗುತ್ತಿದ್ದೇನೆ ಎಂದು ನಾನು ನಿಮಗೆ ಹೇಳಲಾರೆ. ನಾನು ಹೋದರೂ ನಿಮಗೆ ಅರ್ಥವಾಗುವುದಿಲ್ಲ. ದಯವಿಟ್ಟು ನನ್ನನ್ನು ಮರೆತುಬಿಡಿ, ನನ್ನನ್ನು ಕ್ಷಮಿಸಿ. ಅಮ್ಮ ಮತ್ತು ಅಪ್ಪ, ನೀವು ನನಗೆ ಜನ್ಮ ನೀಡಿ ನನ್ನನ್ನು ಬೆಳೆಸಿದ್ದಕ್ಕಾಗಿ ನಾನು ಕೃತಜ್ಞಳಾಗಿರಬೇಕು. ನನ್ನ ಅಧ್ಯಾಯವು ಕೊನೆಗೊಳ್ಳುತ್ತಿದೆ ಎಂದು ಆಕೆ ಬರೆದಿದ್ದಾಳೆ.
ಕೂಡಲೇ ಕುಟುಂಬಸ್ಥರು ಬಾಲಕಿಗೆ ಕರೆ ಮಾಡಿ ದುಡುಕಬೇಡ ಎಂದು ಬುದ್ಧಿ ಮಾತು ಹೇಳುವಷ್ಟರಲ್ಲಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸದ್ಯ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.