ಯಾದಗಿರಿ: ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ನೌಕಾಪಡೆ (Indian Navy) ಅಧಿಕಾರಿಯ ಪತ್ನಿ ಹಾಗೂ ಮಗಳು ಸೇರಿದಂತೆ ಐವರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಈ ಘಟನೆ ತೆಲಂಗಾಣದ (Telangana) ನಾರಾಯಣಪೇಟೆಯ ಜಕ್ಲೇರ್ ಎಂಬಲ್ಲಿ ನಡೆದಿದೆ. ಜಿಲ್ಲೆಯ ಸೈದಾಪುರದ ಮೌಲಾಲಿ, ಖಲೀಲ್ ಹಾಗೂ ಬಸಮ್ಮ ಮೃತಪಟ್ಟಿದ್ದಾರೆ. ಮತ್ತೊಂದು ಕಾರ್ನಲ್ಲಿದ್ದ ಮಹಾರಾಷ್ಟ್ರ ಮೂಲದ ಪ್ರಬೀತಾ ಹಾಗೂ ಅಸ್ಮಿತಾ ಎಂಬವರು ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದೆ.
ಕಾರವಾರದಿಂದ ವಿಶಾಖಪಟ್ಟಣಕ್ಕೆ ವರ್ಗಾವಣೆಗೊಂಡಿದ್ದ ಮಹಾರಾಷ್ಟ್ರ ಮೂಲದ ಭಾರತೀಯ ನೌಕಾಪಡೆಯ ಅಧಿಕಾರಿ ದೀಪಕ್ ಪತ್ನಿ ಹಾಗೂ ಮಗಳೊಂದಿಗೆ ವಿಶಾಖಪಟ್ಟಣಂಗೆ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ದೀಪಕ್ ರಾವ್ ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮಕ್ತಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.