ಚೆನ್ನೈ: ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ.
ಸರ್ಕಾರಿ ಬಸ್ (Government Bus) ಮತ್ತು ಓಮ್ನಿ ಬಸ್ (Omnibus) ಮಧ್ಯೆಯೇ ಅಪಘಾತ ಸಂಭವಿಸಿದ್ದು, ಐವರು ಸಾವನ್ನಪ್ಪಿ, 60ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮುಂಭಾಗ ಸಂಪೂರ್ಣ ಜಖಂಗೊಂಡಿವೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಚೆಟ್ಟಿಯಪ್ಪನೂರಿನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ರಾಜ್ಯ ಎಕ್ಸ್ಪ್ರೆಸ್ ಸಾರಿಗೆ ಸಂಸ್ಥೆಯ ಬಸ್ ಹಾಗೂ ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಓಮ್ನಿಬಸ್ ನಡುವೆ ಅಪಘಾತ ಉಂಟಾಗಿದೆ. ಸಾವನ್ನಪ್ಪಿದವರಲ್ಲಿ ಓರ್ವ ಮಹಿಳೆ ಕೂಡ ಇದ್ದಾರೆ ಎನ್ನಲಾಗಿದೆ. ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮತ್ತೋರ್ವ ವ್ಯಕ್ತಿ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿ ಸರ್ಕಾರಿ ಆಸ್ಪತ್ರೆ ಹಾಗೂ ವೆಲ್ಲೂರಿನ ವೆಲ್ಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.