ಬೆಂಗಳೂರು: ಇತ್ತೀಚೆಗಷ್ಟೇ ತಾಯಿಯನ್ನು ಮಗನೇ ಕೊಲೆ ಮಾಡಿರುವ ಪ್ರಕರಣವೊಂದು ಕೆಆರ್ಪುರ (KRPura) ಪೊಲೀಸ್ (Police) ಠಾಣಾ ವ್ಯಾಪ್ತಿಯ ಭೀಮಯ್ಯ ಲೇಔಟ್ ನಲ್ಲಿ ನಡೆದಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ.
ಪತಿ ಹತ್ಯೆ ಮಾಡಿದ್ದು, ತಂದೆಯನ್ನು ರಕ್ಷಿಸಲು ಅಪ್ರಾಪ್ತ ಮಗನೇ ನಾಟಕವಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರಣೆ ಸಂದರ್ಭದಲ್ಲಿ ಪತಿ ಚಂದ್ರಪ್ಪ ಕೂಡ ಹತ್ಯೆಯ ಸಂದರ್ಭದಲ್ಲಿ ಮನೆಯಲ್ಲಿ ಇದ್ದ ಎಂಬುವುದು ತಿಳಿದು ಬಂದಿದೆ. ನಂತರ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದು, ಪೊಲೀಸರಿಗೆ ಅನುಮಾನ ಮೂಡಿದೆ.
ಆನಂತರ ಕೊಲೆ ಮಾಡಿರುವುದು ಮಗನಲ್ಲ, ತಂದೆ ಎಂಬುವುದು ಗೊತ್ತಾಗಿದೆ. ಚಂದ್ರಪ್ಪನಿಗೆ ಪತ್ನಿ ನೇತ್ರಾಳ ಶೀಲದ ಮೇಲೆ ಅನುಮಾನ ಇತ್ತು. ಹೀಗಾಗಿ ಹಲವು ಬಾರಿ ಇಬ್ಬರ ಮಧ್ಯೆ ಜಗಳ ನಡೆದಿದ್ದವು. ಮಹಿಳೆ ಕೊಲೆಯಾದ ದಿನ ಮುಳಬಾಗಿಲಿನಲ್ಲಿ ಓದುತ್ತಿದ್ದ ಅವರ 17 ವರ್ಷದ ಮಗ ಮನೆಗೆ ಬಂದಿದ್ದ. ಆ ವೇಳೆ ತಿಂಡಿ ಮಾಡಿಕೊಡುವ ವಿಚಾರದಲ್ಲಿ ತಾಯಿ ಹಾಗೂ ಮಗನ ಮಧ್ಯೆ ಜಗಳ ನಡೆದಿದೆ. ಮೊದಲು ಅಪ್ತಾಪ್ತ ಮಗನೇ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.
ದೊಣ್ಣೆ ಕಿತ್ತುಕೊಂಡ ಚಂದ್ರಪ್ಪ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ನೇತ್ರಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆಗ ತಂದೆ, ನಿನಗೆ 17 ವರ್ಷ. ಕೊಲೆ ಮಾಡಿದರೂ ಜೈಲು ಶಿಕ್ಷೆ ಆಗುವುದಿಲ್ಲ. ಹೀಗಾಗಿ ನೀನೆ ಒಪ್ಪಿಕೊಳ್ಳುವಂತೆ ಹೇಳಿದ್ದಾನೆ. ತಂದೆಯ ಮಾತು ಕೇಳಿದ್ದ ಮಗ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವ ವಿಚಾರ ಹೇಳಿದ್ದಾನೆ. ಸದ್ಯ ಪೊಲೀಸರು ನಿಜ ಸಂಗತಿ ಬಯಲು ಮಾಡಿದ್ದಾರೆ.