ಬೆಂಗಳೂರು: ನಗರದಲ್ಲಿನ ಮಾಲ್ ವೊಂದರಲ್ಲಿ (Bengaluru Mall) ಪೊಲೀಸ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದು, ಅವರನ್ನು ಬಂಧಿಸಲಾಗಿದೆ.
ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಉದ್ಯೋಗ ಮಾಡುತ್ತಿದ್ದ 28 ವಯಸ್ಸಿನ ಮಹಿಳೆಯೇ ಈ ಕೃತ್ಯ ನಡೆಸಿದ್ದು, ಅವರನ್ನು ಬಂಧಿಸಲಾಗಿದೆ. ಮಹಿಳೆಗೆ ಮಾಲ್ ಮುಚ್ಚುವ ಸಮಯದಲ್ಲಿ ಹೊರಗಡೆ ಹೋಗುವಂತೆ ಹೇಳಿದ್ದಾರೆ. ಈ ವೇಳೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮೇಲೆಯೇ ಅವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಹಿಳೆಯು ಅ.11 ರ ರಾತ್ರಿ 10:30 ಕ್ಕೆ ಚಲನಚಿತ್ರ ವೀಕ್ಷಣೆಗೆ ಬಂದಿದ್ದರು. ಪ್ರದರ್ಶನ ಮುಗಿದರೂ ಅವರು ಗಂಟೆಗಟ್ಟಲೇ ಅಲ್ಲಿಯೇ ಉಳಿದಿದ್ದಾರೆ. ಅವರು ಮಧ್ಯರಾತ್ರಿ 2:30 ರ ವರೆಗೂ ಇದ್ದರು. ಇದನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಹೀಗಾಗಿ ಅವರು ಹೊರಗಡೆ ಹೋಗುವಂತೆ ಹೇಳಿದ್ದಾರೆ. ಆಗ ಮಹಿಳೆಯು ಸಿಬ್ಬಂದಿ ಹಾಗೂ ಮಾಲ್ ಮ್ಯಾನೇಜರ್ ಅವರನ್ನು ನಿಂದಿಸಿದ್ದಾಳೆ. ಅಲ್ಲದೇ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಬೆಳ್ಳೂರು ಪೊಲೀಸರು ತಿಳಿಸಿದ್ದಾರೆ.
ಗಸ್ತು ಕರ್ತವ್ಯದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆದರೆ, ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಳೆ, ಎಸ್ಐನ ಕೈಗೆ ಕಚ್ಚಿದ್ದಾಳೆ. ಶೂ ಎಸೆದಿದ್ದಾಳೆ ಎನ್ನಲಾಗಿದೆ. ಸದ್ಯ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.