ಇರಾನ್ ನಲ್ಲಿ ಹಿಜಾಬ್ ವಿರೋಧಿಸಿದ್ದ ಮಹಿಳೆಗೆ 74 ಚಡಿ ಏಟಿನ ಶಿಕ್ಷೆ ವಿಧಿಸಲಾಗಿದೆ.
ಇರಾನ್ ನಲ್ಲಿ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಧರಿಸದಿದ್ದರೆ ಕಠಿಣ ಶಿಕ್ಷೆ ವಿಧಿಸುವ ನಿಯಮವೂ ಇದೆ. ಮಹಿಳೆಯರ ಒಂದು ವರ್ಗ ಇದನ್ನು ವಿರೋಧಿಸುತ್ತಿದೆ. ಇತ್ತೀಚೆಗೆ ವಿರೋಧಿಸಿ ಪ್ರತಿಭಟನೆಗಳು ಕೂಡ ನಡೆದಿದ್ದವು. ಆದರೆ, ಅಲ್ಲಿನ ಸರ್ಕಾರ ಇದನ್ನು ಹಿಂಸಾತ್ಮಕವಾಗಿ ನಿಗ್ರಹಿಸಿತ್ತು.
ಹಿಜಾಬ್ ಧರಿಸದ ಇಬ್ಬರು ಮಹಿಳೆಯರಿಗೆ ಇರಾನ್‌ನಲ್ಲಿ ಶಿಕ್ಷೆ ವಿಧಿಸಲಾಗಿದೆ. ಇರಾನ್‌ನಲ್ಲಿ ಕಡ್ಡಾಯ ಹಿಜಾಬ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ಇರಾನ್ ಮಹಿಳೆಯೊಬ್ಬರಿಗೆ ಥಳಿಸಲಾಗಿದ್ದು, ಹಿಜಾಬ್ ಧರಿಸಲು ನಿರಾಕರಿಸಿದ್ದಕ್ಕೆ ಓರ್ವ ಮಹಿಳೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕಡ್ಡಾಯ ಹಿಜಾಬ್ ಅನುಸರಿಸಲು ನಿರಾಕರಿಸಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಟೆಹ್ರಾನ್ ನ್ಯಾಯಾಲಯದ ಆದೇಶದ ಮೇರೆಗೆ ಇರಾನ್ ಅಧಿಕಾರಿಗಳು ರೋಯಾ ಹೆಶ್ಮತಿ ಅವರಿಗೆ 74 ಚಡಿ ಏಟಿನ ಶಿಕ್ಷೆ ವಿಧಿಸಲಾಗಿದ್ದು, ಭಯಾನಕ ವಿವರಗಳನ್ನು ಅವರು ಹಂಚಿಕೊಂಡಿದ್ದಾರೆ.
ರೋಯಾ ಹೆಶ್ಮತಿ ತಮ್ಮ ಶಿಕ್ಷೆಯ ದಿನದಂದು 74 ಚಡಿ ಏಟುಗಳನ್ನು ಸ್ವೀಕರಿಸಲು ತನ್ನ ವಕೀಲರೊಂದಿಗೆ ಜಾರಿ ಘಟಕಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ. ಹಿಜಾಬ್ ಧರಿಸದಿರುವುದಕ್ಕೆ ಅಲ್ಲಿ ಕೂಡ ಧರಿಸುವಂತೆ ಒತ್ತಾಯಿಸಿದ್ದಾರೆ. ನಾನು ಶಿಕ್ಷೆ ಪಡೆಯಲು ಬಂದಿದ್ದೇನೆ ಎಂದು ಹೇಳಿದ್ದಕ್ಕೆ, ಮತ್ತೆ ಕೇಸ್ ದಾಖಲಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಅಹ್ವಾಜ್ ಪ್ರಾಂತ್ಯದ ಬೆಹಬಹಾನ್ ನಿವಾಸಿ ಝೈನಾಬ್‌ಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಿಜಾಬ್ ಇಲ್ಲದೆ ತನ್ನ ಚಿತ್ರಗಳನ್ನು ಹಾಕಿದ್ದಕ್ಕೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.








