ಹಾಸನ: ಮದುವೆ ಮಾಡಿಕೊಳ್ಳಲು ಪ್ರಿಯಕರ ನಿರಾಕರಿಸಿದ್ದಕ್ಕೆ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ, ಶಾಂತಿಗ್ರಾಮದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ, ಅಕ್ಕನಹಳ್ಳಿಕೂಡು ಗ್ರಾಮದ ಅಮೃತ (19) ಸಾವನ್ನಪ್ಪಿದ ಯುವತಿ. ಗೋಕುಲದಾಸ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕಳೆದ ಒಂದು ವರ್ಷದಿಂದ ದಿಲೀಪ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇಬ್ಬರ ಪ್ರೀತಿಯ ವಿಚಾರ ಪೋಷಕರಿಗೆ ತಿಳಿದ ನಂತರ ದಿಲೀಪ್ನನ್ನು ಯುವತಿಯ ಮನೆಗೆ ಬರಲು ಹೇಳಿದ್ದರು. ಆದರೆ ದಿಲೀಪ್ ನುಗ್ಗೇಹಳ್ಳಿಯಲ್ಲಿ ಅಮೃತಳಾನ್ನು ಭೇಟಿಯಾಗಿ, ಮದುವೆಯಾಗಲು ಸಾಧ್ಯವಿಲ್ಲ. ನನಗೂ ನಿನಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಇದರಿಂದಾಗಿ ಯುವತಿ ತೀವ್ರವಾಗಿ ಮನನೊಂದಿದ್ದಾಳೆ ಎನ್ನಲಾಗಿದೆ.
ಎಂದಿನಂತೆ ಅಮೃತ ಕೆಲಸಕ್ಕಾಗಿ ಹಾಸನದ ಬಸ್ ಹತ್ತಿ ಬಂದಿದ್ದಾಳೆ. ಶಾಂತಿಗ್ರಾಮದಲ್ಲಿ ಬಸ್ ಇಳಿದಿದ್ದಾಳೆ. ಆ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ನುಗ್ಗೇಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಸದ್ಯ ಶಾಂತಿಗ್ರಾಮ ಕೆರೆಯಲ್ಲಿ ಶವ ಪತ್ತೆಯಾಗಿದ್ದು, ಪ್ರೀತಿ ಕೈಕೊಟ್ಟ ಹಿನ್ನಲೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಆರೋಪಿ ದಿಲೀಪ್ ನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.