ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ಆರೋಗ್ಯದಲ್ಲಿ ಚೇತರಿಕೆ
ಬೆಂಗಳೂರು: ನಗರದ ಸುಂಕದಕಟ್ಟೆಯಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆ ಯುವತಿ ಮೇಲೆ ನಾಗೇಶ್ ಎಂಬಾತ ಆ್ಯಸಿಡ್ ದಾಳಿ ನಡೆಸುವ ಮೂಲಕ ವಿಕೃತ ಮೆರೆದಿದ್ದ. ಇದರಿಂದ ಶೇ.40 ರಿಂದ ಶೇ.50 ರಷ್ಟು ಸುಟ್ಟುಹೋಗಿದ್ದ ಯುವತಿ ಸ್ಥಿತಿ ಗಂಭೀರವಾಗಿತ್ತು. ಸದ್ಯ ಯುವತಿ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಸಂತ್ರಸ್ತೆಯ ತೊಡೆಯ ಭಾಗಕ್ಕೆ ಸರ್ಜರಿ ಮಾಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಪ್ರಜ್ಞಾಹೀನಳಾಗಿದ್ದ ಯುವತಿಗೆ ಮಧ್ಯರಾತ್ರಿ ವೇಳೆಗೆ ಪ್ರಜ್ಞೆ ಬಂದಿದ್ದು, ಯುವತಿ ಪೋಷಕರ ಜೊತೆ ಮಾತನಾಡುತ್ತಿದ್ದಾಳೆ. ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆ ಐಸಿಯುನಲ್ಲಿ ಯುವತಿಗೆ ಚಿಕಿತ್ಸೆ ಮುಂದುವರೆದಿದೆ. ಮತ್ತೊಂದೆಡೆ ಆ್ಯಸಿಡ್ ದಾಳಿಕೋರ ನಾಗೇಶ್ಗಾಗಿ ಕಾಮಾಕ್ಷಿಪಾಳ್ಯ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.








