ನಟ ವಿಜಯ್ ಅವರು ವಿಜಯ್ ಮಕ್ಕಳ್ ಇಯಕ್ಕಂ ಸಂಘಟನೆ ವತಿಯಿಂದ ಚೆನ್ನೈನ ನೀಲಂಕರೈನಲ್ಲಿ ಅತೀ ಹೆಚ್ಚು ಅಂಕ ಪಡೆದಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಅವರು ಆಡಿದ ಮಾತುಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹೀಗಾಗಿ ಅವರು ರಾಜಕೀಯ ಪ್ರವೇಶ ಮಾಡಬಹುದು ಎಂಬ ಚರ್ಚೆ ಶುರುವಾಗಿದೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಬೆಂಬಲ ಸೂಚಿಸಿದ್ದಾರೆ. ಇದೀಗ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಅವರು ಪುತ್ರ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯ್ ಅವರು ಮಾತನಾಡಿದ ಕಾರ್ಯಕ್ರಮವನ್ನು ನಾನು ಈವರೆಗೂ ನೋಡಿಲ್ಲ. ಮತ ಚಲಾವಣೆ ಮಾಡುವಾಗ ಹಣ ಸ್ವೀಕರಿಸಬೇಡಿ ಎಂದು ವಿಜಯ್ ಅವರು ಹೇಳಿರುವುದು ಒಳ್ಳೆಯ ಮಾತು. ರಾಜಕೀಯಕ್ಕೆ ಯಾರು ಬೇಕಾದರೂ ಬರಬಹುದು. ಅವರು ಬಂದರೂ ಸ್ವಾಗತ ಎಂದು ಹೇಳಿದ್ದಾರೆ.
ನಟ ವಿಜಯ್ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ನೀವು ನಾಳಿನ ಮತದಾರರು. ನೀವು ಉತ್ತಮ ನಾಯಕರನ್ನು ಆಯ್ಕೆ ಮಾಡಲಿದ್ದೀರಿ. ನಾವು ನಮ್ಮ ಬೆರಳಿನಿಂದ ಏಕೆ ಮತ ಚಲಾಯಿಸುತ್ತೇವೆ? ಹಾಗೇ ನಾವು ಮತಕ್ಕಾಗಿ ಹಣವನ್ನು ಸ್ವೀಕರಿಸುವಾಗ ಅದೇ ಬೆರಳಿನಿಂದ ನಮ್ಮ ಕಣ್ಣುಗಳನ್ನು ಚುಚ್ಚುಕೊಳ್ಳುತ್ತೇವೆ. ಮತಕ್ಕಾಗಿ ಲಂಚ ಪಡೆಯಬೇಡಿ ಎಂದು ನಿಮ್ಮ ಪೋಷಕರಿಗೆ ಹೇಳಿ. ಆಗ ಮಾತ್ರ ನಿಮ್ಮ ಶಿಕ್ಷಣಕ್ಕೆ ಪೂರ್ಣತೆ ಬರುತ್ತದೆ ಎಂದು ಕಿವಿ ಮಾತು ಹೇಳಿದ್ದಾರೆ.








