ಚೆನ್ನೈ: ನಟಿ ಖುಷ್ಬು ಅವರು ಪ್ರಚಾರ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.
ನಟಿ ಖುಷ್ಬು ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಸದಸ್ಯರು ಆದರೆ, ಈಗ ಅವರು ಅನಾರೋಗ್ಯದ ಕಾರಣ ನೀಡಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ನಟಿ ಖುಷ್ಬು ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.
2019ರಲ್ಲಿ ದೆಹಲಿಯಲ್ಲಿ ಅಪಘಾತ ಸಂಭವಿಸಿದ್ದ ಸಂದರ್ಭದಲ್ಲಿ ಮೂಳೆ ಮುರಿದಿದೆ. ಕಳೆದ 5 ವರ್ಷಗಳಿಂದ ನಾನು ಆರೋಗ್ಯದ ಕುರಿತು ಮುನ್ನೆಚ್ಚರಿಕೆ ವಹಿಸುತ್ತಿದ್ದೇನೆ. ಆದರೂ ಸಮಸ್ಯೆ ನನ್ನನ್ನು ಕಾಡುತ್ತಿದೆ. ಸದ್ಯ ವೈದ್ಯರು ನನಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದಾರೆ. ಅಲ್ಲದೇ, ಚುನಾವಣಾ ಕಾರ್ಯದಿಂದ ದೂರ ಸರಿಯುವಂತೆ ಹೇಳಿದ್ದಾರೆ. ಹೀಗಾಗಿ ನಾನು ಪ್ರಚಾರ ಕಾರ್ಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಚಾರದ ವೇಳೆ ಹೆಚ್ಚಾಗಿ ಪ್ರಯಾಣವಾಗುತ್ತದೆ. ಹೆಚ್ಚು ಕುಳಿತುಕೊಳ್ಳಬೇಕಾಗುತ್ತದೆ. ಆದರೆ, ಇವುಗಳಿಂದ ನನ್ನ ಆರೋಗ್ಯ ಹದಗೆಡುತ್ತಿದೆ. ಹೀಗಾಗಿ ನಾನು ಪ್ರಚಾರಕ್ಕೆ ವಿರಾಮ ಪಡೆಯುತ್ತಿದ್ದೇನೆ ಎಂದು ಕೂಡ ಅವರು ಹೇಳಿದ್ದಾರೆ.