ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿರುವ ಆರೋಪದ ಮೇರೆಗೆ ಬಂಧಿತನಾಗಿರುವ ತುಪ್ಪದ ಬೆಡಗಿ ರಾಗಿಣಿ ಫ್ರೆಂಡ್ ರವಿಶಂಕರ್ ನನ್ನು ಸಸ್ಪೆಂಡ್ ಮಾಡಲಾಗಿದೆ.
ಬೆಂಗಳೂರಿನ ಜಯನಗರದ ಆರ್‍ಟಿಒ ಕಚೇರಿಯಲ್ಲಿ ಸೆಕೆಂಡ್ ಡಿವಿಜನ್ ಕ್ಲರ್ಕ್ ಆಗಿದ್ದ ರವಿಶಂಕರ್‍ನನ್ನು ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿ 5 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯಾಗಿರುವ ರವಿಶಂಕರ್‍ನನ್ನು ಸೇವೆಯಿಂದ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ.
ಸಾರಿಗೆ ಆಯುಕ್ತ ಶಿವಕುಮಾರ್, ರವಿಶಂಕರ್‍ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಯಾವುದೇ ಒಬ್ಬ ಸರ್ಕಾರಿ ನೌಕರ ಅಥವಾ ಅಧಿಕಾರಿಯನ್ನು ಪೊಲೀಸರು ಇಲ್ಲವೇ ಯಾವುದೇ ತನಿಖಾ ಸಂಸ್ಥೆಗಳು (ಉದಾಹರಣಗೆ-ಎಸಿಬಿ, ಲೋಕಾಯುಕ್ತ, ಸಿಸಿಬಿ, ಸಿಐಡಿ, ಸಿಬಿಐ) ಬಂಧಿಸಿದ 24 ಗಂಟೆಯೊಳಗೆ ಹುದ್ದೆಯಿಂದ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶ ನೀಡಬೇಕೆಂದು ಕಾನೂನಿನಲ್ಲಿ ಉಲ್ಲೇಖವಿದೆ. ಆತ ಜಾಮೀನಿನ ಮೇಲೆ ಹೊರಬಂದು ಇಲಾಖಾ ತನಿಖೆಯಲ್ಲಿ ನಿರಪರಾಧಿಯಾದರೆ ಮತ್ತೆ ಕರ್ತವ್ಯಕ್ಕೆ ಹಾಜರಾಗಬಹುದು. ಒಂದು ವೇಳೆ ಕೋರ್ಟ್‍ನಲ್ಲಿ ಆರೋಪಿಯ ಮೇಲಿರುವ ಆರೋಪ ಸಾಬೀತಾದರೆ ಆತನನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಬಹುದಾಗಿದೆ.
ಸದ್ಯ ರವಿಶಂಕರ್‍ನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಟಿ ರಾಗಿಣಿ ಜತೆಗಿನ ಸಂಬಂಧ, ಡ್ರಗ್ಸ್ ಮಾರಾಟ ಸೇರಿದಂತೆ ಹಲವು ಆಯಾಮಗಳಲ್ಲಿ ರವಿಶಂಕರ್‍ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಡ್ರಗ್ಸ್ ಜಾಲದಲ್ಲಿ ಸಿಲುಕಿ ಒದ್ದಾಡುತ್ತಿರುವ ರವಿಶಂಕರ್‍ಗೆ ಸಾರಿಗೆ ಇಲಾಖೆ ಮತ್ತೊಂದು ಪೆಟ್ಟು ಕೊಟ್ಟಿದೆ.








