ನಟಿ ರಾಗಿಣಿ, ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದರೂ, ನಮಗಾಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ತಿಂಡಿ ಟೀ ನೀಡಿ ಅವರ ಯೋಗಕ್ಷೇಮ ವಿಚಾರಿಸಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಇಂದು ನಾನು ಒಂದು ಮುಖ್ಯವಾದ ನಿರ್ಧಾರ ಮಾಡಿದೆ. ಬಿಬಿಎಂಪಿ ಯಲಹಂಕದ ಪೌರ ಕಾರ್ಮಿಕರೊಂದಿಗೆ ಚಾಯ್ ಪೇ ಚರ್ಚಾ ಮಾಡಿದೆ. ಕಸ ಸ್ವಚ್ಛಗೊಳಿಸಲು ಹಾಗೂ ಗಾರ್ಬೇಜ್ ಕೊಂಡೊಯ್ಯಲು ಎರಡು ದಿನಕ್ಕೊಮ್ಮೆ ಇವರು ಬರುತ್ತಾರೆ. ಈ ಹಿಂದೆ ಸಹ ಇವರನ್ನು ನೋಡುತ್ತಿದ್ದೆ, ಆದರೆ ಇವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಇಂತಹ ಅದ್ಭುತ ವ್ಯಕ್ತಿಗಳು ಯಾವುದೇ ಸ್ವಾರ್ಥವಿಲ್ಲದೆ ನಮಗಾಗಿ ಕೆಲಸ ಮಾಡುತ್ತಿದ್ದಾರೆ. ಮುಗ್ದ ನಗುವಿನ ಇವರ ಮುಖ ಹಾಗೂ ನಡವಳಿಕೆ ಇಷ್ಟವಾಯಿತು. ಜೀವನದ ಬಗ್ಗೆ ಇವರಿಂದ ನೀವು ತುಂಬಾ ಕಲಿಯುತ್ತೀರಿ. ಈ ಕ್ಷಣ ಮನಮುಟ್ಟಿತು ಎಂದು ಪೋಸ್ಟ್ ಮಾಡಿದ್ದಾರೆ.