ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂನ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್
ಹೈದರಾಬಾದ್ : ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕರ್ ಗಳು ಹ್ಯಾಕ್ ಮಾಡಿದ್ದಾರೆ.. ಅಲ್ಲದೇ ಪ್ರೊಫೈಲ್ ಹೆಸರನ್ನು ಬದಲಾಯಿಸಿರುವ ಹ್ಯಾಕರ್ ಗಳು ಹೊಸದಾಗಿ ಎಲಾನ್ ಮಸ್ಕ್ ಎಂದು ಹೆಸರು ಬದಲಾಯಿಸಿದ್ದಾರೆ.
ಇನ್ನೂ ಇದೇ ಖಾತೆಯನ್ನು 9 ದಿನಗಳ ಹಿಂದೆ ಹ್ಯಾಕ್ ಮಾಡಲಾಗಿತ್ತು. ಬಳಿಕ ಮತ್ತೆ ಮರುಸ್ಥಾಪಿಸಲಾಗಿತ್ತು. ಇದೀಗ ಮತ್ತೆ ಖಾತೆಯು ಹ್ಯಾಕ್ ಆಗಿದೆ. ಎಲಾನ್ ಮಸ್ಕ್ ಎಂದು ಹೆಸರು ಬದಲಾಯಿಸುವ ಜೊತೆಗೆ ಫ್ರೊಫೈಲ್ ಚಿತ್ರವನ್ನು ಕೂಡ ಬದಲಿಸಿ, ಟೆಸ್ಲಾ ಸಿಇಒನ ಚಿತ್ರವನ್ನು ಹಾಕಿದ್ದಾರೆ. ಎಐಎಂಐಎಂ ಟ್ವಿಟರ್ ಖಾತೆಯು ಸುಮಾರು 6.78 ಲಕ್ಷ ಫಾಲೋವರ್ಗಳನ್ನು ಹೊಂದಿದೆ.
ಹೈದರಾಬಾದ್ ಪ್ರಧಾನ ಕಚೇರಿಯ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿ 9 ದಿನಗಳ ಹಿಂದೆಯಷ್ಟೇ ಎಐಎಂಐಎಂನ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಆದರೆ ನಾವು ಟ್ವಿಟರ್ಗೆ ವಿಚಾರ ತಿಳಿಸಿದಾಗ ಖಾತೆಯನ್ನು ಮರುಸ್ಥಾಪಿಸಲಾಗಿತ್ತು. ಈಗ ಮತ್ತೆ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಹೈದರಾಬಾದ್ ಪೊಲೀಸರಿಗೆ ಸೋಮವಾರ ದೂರು ನೀಡಲಾಗುವುದು, ಸದ್ಯಕ್ಕೆ ಖಾತೆಯಲ್ಲಿ ಯಾವುದೇ ಟ್ವೀಟ್ಗಳನ್ನು ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.