ದೇಶದ ಎಲ್ಲಾ ಭಾಷೆಗಳೂ ಪೂಜ್ಯನೀಯವಾಗಿವೆ – ನರೇಂದ್ರ ಮೋದಿ…
“ದೇಶದ ಎಲ್ಲಾ ಭಾಷೆಗಳು ಪೂಜ್ಯನೀಯವಾಗಿವೆ. ಬಿಜೆಪಿ ಎಲ್ಲಾ ಭಾಷೆಗಳನ್ನು ಭಾರತೀಯ ಆತ್ಮ ಎಂದು ಪರಿಗಣಿಸುತ್ತದೆ. ಆದರೆ ಭಾಷೆಯ ಆಧಾರದಲ್ಲಿ ಕೆಲವರು ವಿವಾದ ಹುಟ್ಟು ಹಾಕಲು ಯತ್ನಿಸುತ್ತಿದ್ದಾರೆ. ಬಿಜೆಪಿ ನಾಯಕರು ದೇಶದ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೇಂದ್ರದ ಎನ್ ಡಿಎ ಸರ್ಕಾರ ಎಂಟು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜೈಪುರದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ದೇಶದ ಸಂಸ್ಕೃತಿ ಮತ್ತು ಭಾಷಾ ವೈವಿಧ್ಯತೆ ರಾಷ್ಟ್ರಕ್ಕೆ ಹೆಮ್ಮೆ ತಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವ ಮೂಲಕ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಭಾಷೆಯ ಆಧಾರದ ಮೇಲೆ ಹೊಸ ವಿವಾದಗಳನ್ನು ಹುಟ್ಟುಹಾಕುವ ಪ್ರಯತ್ನಗಳು ಇತ್ತೀಚೆಗೆ ನಡೆಯುತ್ತಿವೆ. ಇವುಗಳ ಬಗ್ಗೆ ಕಾಲಕಾಲಕ್ಕೆ ದೇಶದ ಜನತೆಯನ್ನು ಎಚ್ಚರಿಸುವಂತೆ ಬಿಜೆಪಿ ನಾಯಕರಿಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರವು ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸಿ ಹಿಂದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಪ್ರಯತ್ನಿಸುತ್ತಿದೆ ಎಂದು ಹಲವಾರು ಪ್ರಾದೇಶಿಕ ಪಕ್ಷಗಳು, ವಿಶೇಷವಾಗಿ ದಕ್ಷಿಣದ ರಾಜ್ಯಗಳ ಟೀಕೆಗಳ ನಡುವೆ ಮೋದಿಯವರಿಂದ ಈ ಹೇಳಿಕೆ ಬಂದಿದೆ. ಹಿಂದಿ ರಾಷ್ಟ್ರ ಭಾಷೆ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಇತ್ತೀಚೆಗೆ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು.