ಚೆನ್ನೈ: ಗಾನ ಚಕ್ರವರ್ತಿ ಎಸ್.ಪಿ ಬಾಲಸುಬ್ರಮಣ್ಯಂ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತೆಲಗು ಬ್ರಾಹ್ಮಣ ಸಂಪ್ರದಾಯದಂತೆ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಗಾನಗಂಧರ್ವರ ಅಂತ್ಯಕ್ರಿಯೆ ನೆರವೇರಿದೆ.
ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನ ರೆಡ್‍ಹಿಲ್ ಫಾರ್ಮ್ ಹೌಸ್ ನಲ್ಲಿ ಎಸ್‍ಪಿಬಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಎಸ್‍ಪಿಬಿ ಪುತ್ರ ಚರಣ್ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಎಸ್ ಪಿಬಿ ಅವರ ಪಾರ್ಥಿವ ಶರೀರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬೆಳಗ್ಗೆ 7 ಗಂಟೆ ಯಿಂದ 11 ಗಂಟೆವರೆಗೂ ಸಾವಿರಾರು ಮಂದಿ ದರ್ಶನ ಪಡೆದರು. ತಿರುವಳ್ಳೂರ್ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರು ಅಗತ್ಯ ಕಾರ್ಯಗಳ ಸಿದ್ಧತೆ ಮಾಡಿದರು. ಅಲ್ಲದೇ ಸಾವಿರಾರರು ಅಭಿಮಾನಿಗಳು ಅಂತಿಮ ದರ್ಶನ ಪಡೆಯುವ ನಿರೀಕ್ಷೆ ಇದ್ದ ಕಾರಣ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಎಸ್ ಪಿಬಿ ಅವರ ಅಂತಿಮ ದರ್ಶನಕ್ಕೆ ಅಭಿಮಾನಿಗಳ ದಂಡೇ ಹಹರಿದುಬಂದಿತ್ತು. ಅನೇಕ ಗಣ್ಯರು “ಗಂಧರ್ವ” ಲೋಕದತ್ತ ಪಯಣಿಸಿದ ಗಾನಗಂಧರ್ವನಿಗೆ ಅಂತಿಮ ನಮಸ ಸಲ್ಲಿಸಿದರು.
ಕನ್ನಡಾಭಿಮಾನಿಗಳಿಂದ ಅತಿ ಹೆಚ್ಚು ಪ್ರೀತಿ ಪಡೆದ “ಜಗ ಮೆಚ್ಚಿದ ಮಗ” ಎಸ್ ಪಿಬಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇತ್ತು. ನಾನು ಮತ್ತೊಮ್ಮೆ ಹುಟ್ಟಿದ್ರೆ ಕರ್ನಾಟಕದಲ್ಲಿ ಕನ್ನಡಿಗನಾಗಿ ಹುಟ್ಟಬೇಕು ಎಂದಿದ್ದ “ಸ್ವರ ಮಾಣಿಕ್ಯ” ತಮ್ಮ ಹಾಡುಗಳ ಮೂಲಕ ಸದಾ ಅಮರ.








