ಅಲ್ಲು ಅರ್ಜುನ್ ಗೆ ನೋಟಿಸ್ ಕಳುಹಿಸಿದ ಕನ್ನಡಿಗ ಸಜ್ಜನರ್ : ಕಾರಣವೇನು…?  

1 min read

ಅಲ್ಲು ಅರ್ಜುನ್ ಗೆ ನೋಟಿಸ್ ಕಳುಹಿಸಿದ ಕನ್ನಡಿಗ ಸಜ್ಜನರ್ : ಕಾರಣವೇನು…?

ಟಾಲಿವುಡ್ ನ ಸ್ಟಾರ್ ನಟ ಅಲ್ಲು ಅರ್ಜುನ್ ಗೆ ವಿ.ಸಿ ಸಜ್ಜನರ್ ನೋಟೀಸ್ ಜಾರಿ ಮಾಡಿದ್ದಾರೆ.. ಸಜ್ಜನರ್ ದಿಶಾ ಅತ್ಯಾಚಾರ ಪ್ರಕರಣದ ಆರೋಪಿಯನ್ನ ಎನ್ ಕೌಂಟರ್ ಮಾಡಿದ್ದ ಕನ್ನಡದ ಹೆಮ್ಮೆಯ ಐಪಿಎಸ್ ಅಧಿಕಾರಿ..  ಪ್ರಸ್ತುತ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ  ಸಜ್ಜನರ್ ಇದೀಗ ಜಾಹೀರಾತೊಂದಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಗೆ ನೋಟಿಸ್ ಜಾರಿ ಮಾಡಿದ್ದಾರೆ..  ಹೌದು  ರ್ಯಾಪಿಡೊ ಹೆಸರಿನ ಬೈಕ್ ಸಾರಿಗೆ ಸೇವೆ ಕುರಿತ ಜಾಹೀರಾತೊಂದರಲ್ಲಿ ನಟ ಅಲ್ಲು ಅರ್ಜುನ್ ನಟಿಸಿದ್ದಾರೆ. ಇದೇ ಜಾಹಿರಾತಿಗೆ ಅಸಮಾಧಾನ ವ್ಯಕ್ತಪಡಿಸಿದ್ದು ನೊಟೀಸ್ ಜಾರಿ ಮಾಡಿದ್ದಾರೆ.

ಜಾಹೀರಾತಿನಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನ ಬಗ್ಗೆ ವ್ಯಂಗ್ಯವಾದ ಸಂಭಾಷಣೆಯನ್ನು ಅಲ್ಲು ಅರ್ಜುನ್ ಹೇಳಿದ್ದಾರೆ. ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ದೋಸೆ ಹಾಕುತ್ತಿರುತ್ತಾರೆ. ”ಒಳ್ಳೆಯ ದೋಸೆ ತಿನ್ನಬೇಕೆಂದರೆ ಎರಡೇ ಜಾಗ ಇರುವುದು. ಒಂದು ನನ್ನ ಹೋಟೆಲ್ ಇನ್ನೊಂದು ಆ ಬಸ್ಸು (ರಾಜ್ಯ ಸಾರಿಗೆ ಬಸ್ಸು). ಅಲ್ಲಿ ಮಾಮೂಲಿ ದೋಸೆಯಂತೆ ಬಸ್ಸು ಹತ್ತಿದವನನ್ನೂ ಸಹ ಕುರ್ಮಾ ಹಾಕಿ, ಕೈಮಾ ಮಾಡಿ ಮಸಾಲೆ ದೋಸೆಯಂತೆ ಮಾಡಿಬಿಡುತ್ತಾರೆ. ಯಾಕೆ ಆ ಬೇಡದ ತೊಂದರೆ, ಸುಮ್ಮನೆ ರ್ಯಾಪಿಡೊ ಬುಕ್ ಮಾಡಿಕೊಳ್ಳಿ” ಎಂದು ಹೇಳಿದ್ದಾರೆ.. ಇದರ ವಿರುದ್ಧ ಸಾರಿಗೆ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯ ಸಾರಿಗೆ ಬಸ್ಸಿನ ಬಗ್ಗೆ ವ್ಯಂಗ್ಯ ಜಾಹೀರಾತಿನಲ್ಲಿ ತೆಲಂಗಾಣ ರಾಜ್ಯ ಸಾರಿಗೆ ಬಸ್ಸನ್ನು ತೋರಿಸಲಾಗಿದೆ. ಬಸ್ಸಿನಲ್ಲಿ ತುಂಬಾ ಜನಜಂಗುಳಿ ಇರುವಂತೆಯೂ ಆ ಬಸ್ಸಿನ ಪ್ರಯಾಣ ಸುಖಕರವಲ್ಲ ಎಂಬ ಭಾವನೆ ಮೂಡುವಂತೆ ಚಿತ್ರಿಸಲಾಗಿದೆ. ಹಾಗೂ ಬಸ್ಸಿನ ಪ್ರಯಾಣಕ್ಕಿಂತಲೂ ರ್ಯಾಪಿಡೊ ಪ್ರಯಾಣ ಕಡಿಮೆ ವೆಚ್ಚ ಹಾಗೂ ಆರಾಮದಾಯಕ ಎಂದು ಬಿಂಬಿಸಲಾಗಿದೆ.

ಜಾಹಿರಾತಿನ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿ ವಿಡಿಯೋ ಬಿಡುಗಡೆ ಮಾಡಿರುವ ಸಜ್ಜನರ್, ”ಟಿಎಸ್ಆರ್‌ಟಿಸಿ ಯನ್ನು ಕೆಟ್ಟದಾಗಿ ಬಿಂಬಿಸುವ ಜಾಹೀರಾತೊಂದನ್ನು ಖಾಸಗಿ ಸಂಸ್ಥೆ ಬಿಡುಗಡೆ ಮಾಡಿದೆ. ನಿಮ್ಮ ಉತ್ಪನ್ನ ಚೆನ್ನಾಗಿದ್ದರೆ ಅದರ ಬಗ್ಗೆ ಮಾತನಾಡಿ. ಆದರೆ, ಎದುರಾಳಿ ಸಂಸ್ಥೆಯನ್ನು ಕೆಟ್ಟದಾಗಿ ಬಿಂಬಿಸುವುದು ಒಳ್ಳೆಯ ವ್ಯವಹಾರ ನೀತಿ ಅಲ್ಲ. ಜಾಹೀರಾತಿನಲ್ಲಿ ನಟಿಸಿರುವ ನಟ ಸಹ ಅದನ್ನು ಗಮನಿಸಬೇಕಾಗಿತ್ತು” ಎಂದು ಅಸಮಾಧಾನ ಹೊರಹಾಕಿದ್ದಾರೆ.

”ಟಿಎಸ್‌ಆರ್‌ಟಿಸಿಯು ದಶಕಗಳಿಂದಲೂ ಪ್ರಜೆಗಳಿಗೆ ಸೇವೆ ಸಲ್ಲಿಸುತ್ತಿದೆ. ರಾಜ್ಯದ ಮೂಲೆ-ಮೂಲೆಗಳಲ್ಲಿಯೂ ನಮ್ಮ ಸೇವೆ ಇದೆ. ಬಡವರಿಗಾಗಿ, ಮಧ್ಯಮವರ್ಗದ ಜನರಿಗಾಗಿಯೆಂದು ನಾವು ಸೇವೆ ನೀಡುತ್ತಿದ್ದೇವೆ. ಇಂಥಹ ಸಂಸ್ಥೆಯ ಬಗ್ಗೆ ಕೆಟ್ಟದಾಗಿ ಬಿಂಬಿಸಿರುವುದು ಸರಿಯಲ್ಲ. ಆ ಜಾಹೀರಾತನ್ನು ಕೂಡಲೇ ಹಿಂಪಡೆಯಬೇಕು ಎಂದು ನಾವು ನೊಟೀಸ್ ನೀಡಿದ್ದೇವೆ” ಎಂದು ಸಜ್ಜನರ್ ಹೇಳಿದ್ದಾರೆ.

ಇದೇ ವೇಳೆ ”ನಟರು ಸಹ ಈ ರೀತಿಯ ಜಾಹೀರಾತುಗಳು, ಸಿನಿಮಾಗಳಲ್ಲಿ ನಟಿಸುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಟರು, ಕ್ರೀಡಾ ಸೆಲೆಬ್ರಿಟಿಗಳು ಜನರ ಆಲೋಚನೆಗಳ ಮೇಲೆ ಪ್ರಭಾವ ಬೀರುವ ಶಕ್ತಿಯುಳ್ಳವರಾಗಿರುತ್ತಾರೆ. ಅವರು ಹೇಳಿದರೆ ಜನರು ಅದನ್ನು ಕೇಳುತ್ತಾರೆ. ಅಂಥಹವರೇ ಹೀಗೆ ಜನರು ದಿಕ್ಕು ತಪ್ಪುವಂತೆ ಮಾಡಬಾರದು. ನಮಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ ಆದರೆ ನಮ್ಮ ಸಂಸ್ಥೆಯನ್ನು ಹೀಗೆ ಕೀಳಾಗಿ ತೋರಿಸಿದ್ದರಿಂದ ನಾವು ನೋಟೀಸ್ ನೀಡಿದ್ದೇವೆ. ಸೆಲೆಬ್ರಿಟಿಗಳು ಒಂದೊಳ್ಳೆ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದ್ದಾರೆ.

ಲಸಿಕೆ ಪಡೆಯದಿದ್ರೂ ಮೊಬೈಲ್ ಕೋವಿಡ್ ಮೆಸೆಜ್…

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd