Z+ ಭದ್ರತೆಯನ್ನ ತೆಗೆದುಕೊಳ್ಳುವಂತೆ ಓವೈಸಿ..ಯನ್ನ ಒತ್ತಾಯಿಸಿದ ಅಮಿತ್ ಶಾ
ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಬೆಂಗಾವಲು ವಾಹನದ ಮೇಲೆ ಇತ್ತೀಚೆಗೆ ದಾಳಿ ನಡೆದಿತ್ತು. ಈ ಕುರಿತು ಕೇಂದ್ರ ಸರ್ಕಾರ ನೀಡಿದ Z ಕೆಟಗರಿ ಭದ್ರತೆಯನ್ನು ಸ್ವೀಕರಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಓವೈಸಿಯನ್ನ ಒತ್ತಾಯಿಸಿದ್ದಾರೆ.
ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ, ವಿಸ್ತೃತ ತನಿಖೆ ನಡೆಯುತ್ತಿದೆ ಮತ್ತು ರಾಜ್ಯ ಸರ್ಕಾರದಿಂದ ವರದಿ ಕೇಳಲಾಗಿದೆ ಎಂದು ಅಮಿತ್ ಶಾ ಹೇಳಿದರು.“ ಇಬ್ಬರನ್ನು ಬಂಧಿಸಲಾಗಿದೆ ಮತ್ತು ಪೊಲೀಸರು ಒಂದು ಕಾರು ಮತ್ತು ಎರಡು ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಧಿವಿಜ್ಞಾನ ತಂಡವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಉತ್ತರ ಪ್ರದೇಶ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು.
ಇದಲ್ಲದೆ, ಒವೈಸಿ ಭದ್ರತೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರವು ಅವರಿಗೆ ನೀಡಿದ ಭದ್ರತೆಯನ್ನು ಸ್ವೀಕರಿಸಲು ಎಐಎಂಐಎಂ ಸಂಸದರನ್ನು ವಿನಂತಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು.”ಅವರಿಗೆ ದೆಹಲಿಯಲ್ಲಿ ಬುಲೆಟ್ ಪ್ರೂಫ್ ಕಾರ್ ಜೊತೆಗೆ ಅಖಿಲ ಭಾರತ ಆಧಾರದ ಮೇಲೆ Z ವರ್ಗದ CRPF ಭದ್ರತೆಯನ್ನು ಒದಗಿಸಲಾಗಿದೆ” ಎಂದು ಶಾ ಹೇಳಿದರು.
ಫೆಬ್ರವರಿ 3 ರಂದು, ಓವೈಸಿ ಉತ್ತರ ಪ್ರದೇಶದ ಮೀರತ್ನಲ್ಲಿ ಚುನಾವಣಾ ಸಂಬಂಧಿತ ಕಾರ್ಯಕ್ರಮವನ್ನು ಮುಗಿಸಿ ದೆಹಲಿಗೆ ಹಿಂದಿರುಗುತ್ತಿದ್ದಾಗ ಮೀರತ್ನ ಟೋಲ್ ಪ್ಲಾಜಾದಲ್ಲಿ ಓವೈಸಿ ಅವರ ಕಾರಿಗೆ ಮೂರು-ನಾಲ್ಕು ಸುತ್ತಿನ ಬುಲೆಟ್ಗಳನ್ನು ಹಾರಿಸಲಾಯಿತು. ಅವರು ಅಪಾಯದಿಂದ ಪಾರಾಗಿದ್ದಾರೆ.