ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಗೆ ಬಂದಿದ್ದರೂ ಬಿಜೆಪಿ ಬಂಡಾಯ ನಾಯಕ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಿಲ್ಲ.
ಬುಧವಾರ ಈಶ್ವರಪ್ಪ ದೆಹಲಿಗೆ ಬಂದಾಗ, ಅಮಿತ್ ಶಾ ಕಚೇರಿಯಿಂದ ದೂರವಾಣಿ ಕರೆ ಬಂದಿತ್ತು. ಆಗ ಗೃಹ ಸಚಿವರು ಭೇಟಿಯಾಗುವುದಿಲ್ಲ ಎಂಬ ಸಂದೇಶ ನೀಡಲಾಯಿತು. ಈ ಹಿನ್ನೆಲೆ ಬೆಂಗಳೂರಿಗೆ ಮರಳಲು ಈಶ್ವರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ವಿಷಯವಾಗಿ ಮಾತನಾಡಿರುವ ಈಶ್ವರಪ್ಪ, ಅಮಿತ್ ಶಾ ಭೇಟಿಯಾದರೂ, ಭೇಟಿಯಾಗದಿದ್ದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಈಗ ಅಮಿತ್ ಶಾ ಭೇಟಿಯಾಗದಿರುವುದು ಚುನಾವಣೆ ಸ್ಪರ್ಧೆಗೆ ಸಂದೇಶ ನೀಡಿದಂತೆ ಎಂದು ಹೇಳಿದ್ದಾರೆ.
ಶಾ ಹೇಳಿದರು ಅಂತಾ ದೆಹಲಿಗೆ ಬಂದೆ. ಅವರು ಸಿಗಲ್ಲ ಅಂತಾ ಹೇಳಿದರು. ಈಶ್ವರಪ್ಪ ನಿಲ್ಲಲಿ, ರಾಘವೇಂದ್ರ ಸೋಲಿಸಬೇಕು ಎನ್ನುವುದು ಅಮಿತ್ ಶಾ ಆಪೇಕ್ಷೆ. ನಾನು ಮೋದಿ, ಅಮಿತ್ ಶಾ ಆಶೀರ್ವಾದದಿಂದ ಗೆಲ್ಲುತ್ತೇನೆ. ಎಲ್ಲರ ಸಹಕಾರದಲ್ಲಿ ನಾನು ಚುನಾವಣೆ ಗೆದ್ದು, ಮೋದಿ ಕೈ ಬಲಪಡಿಸುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಎಸ್‌ವೈ ಕುಟುಂಬಕ್ಕೆ ಒಂದು ನೀತಿ, ನಮಗೆ ಒಂದು ನೀತಿನಾ? ಅವರ ಮನೆಯಲ್ಲಿ ಸಂಸದ, ಶಾಸಕ, ರಾಜ್ಯಾಧ್ಯಕ್ಷ ಆಗಿದ್ದಾರೆ. ನಮ್ಮ ಮನೆಯಲ್ಲಿ ಶಾಸಕನೂ ಇಲ್ಲ ಸಂಸದನೂ ಇಲ್ಲ. ನಾನು ಶಾಸಕರಾಗಿ ನನ್ನ ಮಗನಿಗೆ ಟಿಕೆಟ್ ಕೇಳ್ತಿಲ್ಲ ಎಂದು ಹೇಳಿದ್ದಾರೆ.