ಇಸ್ಲಾಮಾಬಾದ್: ಪಾಕ್ ಜೈಲಿನಲ್ಲಿ ಭಾರತೀಯ ವ್ಯಕ್ತಿಯನ್ನು ಕೊಲೆ ಮಾಡಿದ್ದ ಹಂತಕನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಹಂತಕ ಅಮೀರ್ ಸರ್ಫರಾಜ್ ಅಲಿಯಾಸ್ ತಾಂಬಾನನ್ನು ಲಾಹೋರ್ ನಲ್ಲಿ ಅಪರಿಚಿತರು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ತಾಂಬಾನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಆಪಾದಿತ ಭಯೋತ್ಪಾದನೆ ಮತ್ತು ಬೇಹುಗಾರಿಕೆ ಆರೋಪದಲ್ಲಿ ಸರಬ್ಜಿತ್ ಸಿಂಗ್ (49) ರನ್ನು ಪಾಕ್ ಕೋರ್ಟ್ 1991ರಲ್ಲಿ ಮರಣ ದಂಡನೆಗೆ ಗುರಿ ಪಡಿಸಿತ್ತು. ಆದರೆ, ಸರ್ಕಾರ 2008 ರಲ್ಲಿ ಅನಿರ್ದಿಷ್ಟ ಅವಧಿಗೆ ಸಿಂಗ್ ಮರಣ ದಂಡನೆ ತಡೆದಿತ್ತು. ಆದರೆ, 2013ರಲ್ಲಿ ಸರಬ್ಜಿತ್ ಸಿಂಗ್ ಸಾವನ್ನಪ್ಪಿದ್ದರು.