ನವದೆಹಲಿ: ಭಾರತೀಯ ಮೂಲದ ಕುಟುಂಬವೊಂದು ಅಮೆರಿಕದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಭಾರತೀಯ ಮೂಲದ ಟೆಕ್ ಕಂಪನಿಯ ಮುಖ್ಯಸ್ಥರಾಗಿದ್ದ ದಂಪತಿ ಹಾಗೂ ಅವರ ಪುತ್ರಿ ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದ ಬಾಸ್ಟನ್ ಹತ್ತಿರ ಇರುವ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೌಟುಂಬಿಕ ಕಲಹ ಇದಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
57 ವರ್ಷದ ರಾಕೇಶ್ ಕಮಲ್, ಅವರ ಪತ್ನಿ, 54 ವರ್ಷದ ಟೀನಾ ಮತ್ತು ಅವರ 18 ವರ್ಷದ ಮಗಳು ಅರಿಯಾನಾ ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದೆ. ಟೀನಾ ಮತ್ತು ಅವರ ಪತಿ ರಾಕೇಶ್ ಈ ಹಿಂದೆ ಎಡುನೋವಾ ಎಂಬ ಶಿಕ್ಷಣ ವ್ಯವಸ್ಥೆಗಳ ಕಂಪನಿ ನಡೆಸುತ್ತಿದ್ದರು. ಗಂಡನ ದೇಹದ ಬಳಿ ಗನ್ ಕಂಡುಬಂದಿದೆ ಎಂದು ಸ್ಥಳೀಯ ಅಧಿಕಾರಿ ಹೇಳಿದ್ದಾರೆ. ಕುಟುಂಬದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಂದಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿರುವ ಟೀನಾ ಕಮಲ್ ಅವರು ಎಡುನೋವಾ ಕಂಪನಿಯ ಸಿಇಒ ಆಗಿದ್ದರು ಎನ್ನಲಾಗಿದೆ. ಬೋಸ್ಟನ್‌ನ 25ರ ಮಾಹಿತೆಯಂತೆ, ಕುಟುಂಬವು ಆರ್ಥಿಕ ಮುಗ್ಗಟ್ಟಿನಲ್ಲಿರಬಹುದು ಎಂಬ ಸೂಚನೆ ಸಿಕ್ಕಿದೆ. ಕಳೆದ ವರ್ಷವಷ್ಟೇ ಟೀಮಾ ಕಮಲ್ ಇಲ್ಲಿನ ಕೋರ್ಟ್‌ಗೆ ದಿವಾಳಿತನದ ಅರ್ಜಿ ಸಲ್ಲಿಸಿದ್ದರು. ತ್ವರಿತವಾಗಿ ಹಣ ಬೇಕಿದ್ದ ಕಾರಣಕ್ಕೆ ತಮ್ಮ 6.8 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಐಷಾರಾಮಿ ಬಂಗಲೆಯನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಅಂದರೆ, 3 ಮಿಲಿಯನ್ ಯುಎಸ್ ಡಡಾಲರ್‌ಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ.