ಭಾರತಕ್ಕೆ ವಾಪಸ್ಸಾದ ನಲಂದಾ ವಸ್ತು ಸಂಗ್ರಹಾಲಯದಿಂದ ಕಳುವಾಗಿದ್ದ ಮೂರ್ತಿ
ನವದೆಹಲಿ: ನಲಂದಾ ವಸ್ತು ಸಂಗ್ರಹಾಲಯದಿಂದ ಕಳುವಾಗಿದ್ದ, 8ನೇ ಶತಮಾನದ ಬೋಧಿಸತ್ವ ಮೈತ್ರೇಯ ಕಂಚಿನ ಮೂರ್ತಿಯು ಮತ್ತೆ ಭಾರತಕ್ಕೆ ವಾಪಸ್ಸಾಗಲಿದೆ
ಬಿಹಾರದ ನಳಂದಾ ವಸ್ತುಸಂಗ್ರಹಾಲಯದಿಂದ ಕಳುವಾಗಿದ್ದ ಈ ಮೂರ್ತಿಯನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸಕ್ಕೆ ಹಸ್ತಾಂತರಿಸಲಾಗಿದೆ.
ಈ ಹಿಂದೆ ನಳಂದಾ ಸಂಗ್ರಹಾಲಯವನ್ನು 1961 ಅಗಸ್ಟ್ 21 ರಂದು ಮತ್ತು 1962ರ ಮಾರ್ಚ್ ನಲ್ಲಿ ಎರಡು ಬಾರಿ ಲೂಟಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ 14 ಕಂಚಿನ ಮೂರ್ತಿಗಳು ಕಳುವಾಗಿದ್ದವು.
ಈ ಕುರಿತು ಪ್ರತಿಕ್ರಯಿಸಿರುವ ಇಂಡಿಯಾ ಪ್ರೈಡ್ ಪ್ರೋಜೆಕ್ಟ್ ನ ಎಸ್.ವಿಜಯ ಕುಮಾರ್ “ಇದು ಪ್ರಾಚೀನ ವಸ್ತುಗಳ ಕಳ್ಳಸಾಗಣೆಯ ವಿರುದ್ಧ ಭಾರತಕ್ಕೆ ಸಿಕ್ಕ ಐತಿಹಾಸಿಕ ಜಯವಾಗಿದೆ. ಹೋಮ್ ಲ್ಯಾಂಡ್ ಸೆಕ್ಯುರಿಟಿಯವರ ಸಹಕಾರದೊಂದಿಗೆ ತನಿಖೆ ನಡೆಸಿ ವಿಗ್ರಹ ಕಳುವಾದ ಬಗ್ಗೆ ಅಗತ್ಯ ಪುರಾವೆಗಳನ್ನು ಒದಗಿಸಲಾಯಿತು. ಈ ಎಲ್ಲ ಪ್ರಯತ್ನಗಳ ಫಲವಾಗಿ ಈ ಮೂರ್ತಿ ಮತ್ತೆ ಭಾರತಕ್ಕೆ ವಾಪಸ್ಸಾಗುವಂತಾಗಿದೆ.” ಎಂದು ಹೇಳಿದ್ದಾರೆ.
2019 ರಲ್ಲಿ ಬುದ್ಧ ವಿಗ್ರಹದ ಮರುಸ್ಥಾಪನೆಯ ಕುರಿತಾಗಿ ಲಂಡನ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಾಚೀನ ವಸ್ತುಗಳ ಕಳ್ಳ ಸಾಗಣೆಯ ವಿರುದ್ಧ ಹೋರಾಟಗಾರರು ಧ್ವನಿ ಎತ್ತಿದರು. ಅಮೆರಿಕವು ಈ ಕುರಿತು ಅಗತ್ಯ ಪುರಾವೆಗಳನ್ನು ಒದಗಿಸಲು ಹೇಳಿತ್ತು.