ಪ್ರಶ್ನೆ ಪತ್ರಿಕೆ ಸೋರಿಕೆ – ಆಂಧ್ರ ಟಿಡಿಪಿ ನಾಯಕ ನಾರಾಯಣ ಬಂಧನ…
ಆಂಧ್ರಪ್ರದೇಶದ ತಿರುಪತಿಯಲ್ಲಿ ಮಾಜಿ ಸಚಿವರ ಒಡೆತನದ ನಾರಾಯಣ ಶಾಲೆಯಲ್ಲಿ ನಡೆದ 10ನೇ ತರಗತಿ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖಂಡ ಪಿ ನಾರಾಯಣ ಅವರನ್ನು ಚಿತ್ತೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಯ ಸಿಬ್ಬಂದಿ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.
ಏಪ್ರಿಲ್ 27 ರಂದು ಎಸ್‌ಎಸ್‌ಸಿ ಪರೀಕ್ಷೆಯ ಪತ್ರಿಕೆಯನ್ನು ಅಪರಿಚಿತ ವ್ಯಕ್ತಿಗಳು ವಾಟ್ಸಾಪ್ ಗ್ರೂಪ್‌ಗಳಲ್ಲಿ ಪ್ರಸಾರ ಮಾಡುತ್ತಿರುವುದನ್ನು ಕಂಡು ಜಿಲ್ಲಾ ಶಿಕ್ಷಣಾಧಿಕಾರಿ ದೂರು ದಾಖಲಿಸಿದ್ದಾರೆ. ವರದಿಗಾರರ ಮೂಲಕ ಪ್ರಶ್ನೆ ಪತ್ರಿಕೆ ಚಿತ್ರ ಪಡೆದುಕೊಂಡ ಅಧಿಕಾರಿಗಳು ಮೂಲ ತೆಲುಗು ಪ್ರಶ್ನೆ ಪತ್ರಿಕೆಯೊಂದಿಗೆ ತಾಳೆ ಮಾಡಿದ್ದಾರೆ.
ಪರೀಕ್ಷೆ ಪ್ರಾರಂಭವಾದ ನಂತರ, ಪ್ರಶ್ನೆ ಪತ್ರಿಕೆ ಪಡದುಕೊಂಡ ನಂತರ ಕೆಲವು ಅಪರಿಚಿತ ಕಿಡಿಗೇಡಿಗಳು, ಚಿತ್ರಗಳನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣರನ್ನಾಗಿಸುವ ಪ್ರಯತ್ನ ಇದಾಗಿತ್ತು.
ಪೋಲೀಸರ ಪ್ರಕಾರ, ಶಾಲೆಯ ಆಡಳಿತವು JEE ಮತ್ತು NEET ನಲ್ಲಿ ಉತ್ತಮ ಶ್ರೇಣಿ ಗಳಿಸುವ ಗುರಿಯೊಂದಿಗೆ ಇತರ ವಿಷಯಗಳ ಬೋಧನೆಯತ್ತ ಗಮನಹರಿಸಿತ್ತು, ಆದ್ದರಿಂದ ಅವರು ಭಾಷಾ ವಿಷಯಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.








