ಬೆಂಗಳೂರು : ಸರ್ಕಾರವು (Karnataka Government) ಅನ್ನ ಭಾಗ್ಯ (Anna Bhagya) ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಅಕ್ಕಿಯ ಕೊರತೆಯಿಂದಾಗಿ ಹೆಚ್ಚುವರಿ 5 ಕೆಜಿಯ ಬದಲಾಗಿ 170 ರೂ. ಹಣ ನೀಡುವ (Cash Transfer) ಯೋಜನೆಗೆ ಸರ್ಕಾರ ಮುಂದಾಗಿತ್ತು.
ಆದರೆ, ಯೋಜನೆಗೆ ಚಾಲನೆ ಸಿಕ್ಕು 1 ವಾರ ಕಳೆದರೂ 12 ಜಿಲ್ಲೆಗಳ ಫಲಾನುಭವಿಗಳಿಗೆ ಇಲ್ಲಿಯವರೆಗೂ ಹಣ ಸಿಕ್ಕಿಲ್ಲ. ಕೇವಲ 19 ಜಿಲ್ಲೆಯ ಫಲಾನುಭವಿಗಳಿಗೆ ಮಾತ್ರ ಅನ್ನಭಾಗ್ಯದ ಹಣ ಜಮೆಯಾಗಿದೆ ಎನ್ನಲಾಗಿದೆ. ಹೀಗಾಗಿ ಉಳಿದ 12 ಜಿಲ್ಲೆಗಳಿಗೆ ಹಣ ತಲುಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆಧಾರ್ ಕಾರ್ಡ್, ಅಕೌಂಟ್ ಲಿಂಕ್ ಆಗದಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಯಾಗಿದೆ ಎನ್ನಲಾಗುತ್ತಿದೆ.
ಆಹಾರ ಇಲಾಖೆ ಅಧಿಕಾರಿಗಳು ಚಾಮರಾಜನಗರ, ಮಂಡ್ಯ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯನಗರ, ಹಾಸನ, ವಿಜಯಪುರ, ಹಾವೇರಿ, ಚಿಕ್ಕಬಳ್ಳಾಪುರ, ಶಿವಮೊಗ್ಗ ಜಿಲ್ಲೆಗಳ ಜನರಿಗೆ ಹಣ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ.