10 ವರ್ಷ ವಯಸ್ಸಿನ ಜಯದಿತ್ಯ ಅವಿನಾಶ್ ಶೆಟ್ಟಿ ಮುಂಬೈನ ಚಾಂಡಿವಲಿಯ ಪವಾರ್ ಪಬ್ಲಿಕ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿ. ಕ್ರಿಕೆಟ್ ಆಟ ಈತನ ಇಷ್ಟದ ಕ್ರೀಡೆ. ಇಡ್ಲಿ ಮತ್ತು ಕೋರಿ ರೋಟಿ ತಿನ್ನಲು ಇಷ್ಟ ಪಡುವ ಈತ ಮಾರ್ವೆಲ್ ಸೂಪರ್ ಹೀರೋ ಮೂವಿ ಅಭಿಮಾನಿ. ಇವನನ್ನು ಎಲ್ಲರಿಗಿಂತ ವಿಶೇಷ ಮತ್ತು ವಿಭಿನ್ನನನ್ನಾಗಿ ಮಾಡಿರುವುದು ಸಂಖ್ಯೆಗಳೊಂದಿಗೆ ಈತ ಮಾಡುವ ಮೋಡಿ, ಎಂತಹ ಕಷ್ಟದ ಲೆಕ್ಕಾಚಾರಗಳನ್ನು ವೇಗವಾಗಿ ಮಾಡುವ ಈತನ ಸಾಮರ್ಥ್ಯ.
ತನ್ನ ಅಸಾಧಾರಣ ಪ್ರತಿಭೆಯಿಂದಾಗಿ, ಜಯದಿತ್ಯ ಯಾರೂ ಊಹಿಸಲು ಆಗದ ಸಾಹಸಗಳನ್ನು ಸಾಧಿಸಿದ್ದಾನೆ. 2019 ರ ಮೆಮೋರಿಯಡ್ ಟರ್ಕಿ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಹಲವಾರು ಟ್ರೋಫಿಗಳನ್ನು ಮತ್ತು ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಪ್ರಶಸ್ತಿಗಳನ್ನು ತಂದಿದ್ದಾನೆ. ಗಣಿತ ಎಂದರೆ ಹೆಚ್ಚಿನ ಮಕ್ಕಳು ಭಯಪಟ್ಟರೆ, ಜಯದಿತ್ಯ ಗಣಿತದೊಂದಿಗೆ ಆಟವಾಡುವ ಕೆಲವೇ ಕೆಲವು ಮ್ಯಾಥ್‌ಲೆಟ್ ನಲ್ಲಿ ಒಬ್ಬ. ಈತ ಅಂತರರಾಷ್ಟ್ರೀಯ ಮಟ್ಟದಲ್ಲಿ 13 ದೇಶಗಳ 168 ಸ್ಪರ್ಧಿಗಳ ವಿರುದ್ಧ ತನ್ನ ಪರಾಕ್ರಮವನ್ನು ಪ್ರದರ್ಶಿಸಿದ್ದಾನೆ.
ಟರ್ಕಿಯ ಇಸ್ತಾಂಬುಲ್ ನ ಪ್ರತಿಷ್ಠಿತ ಅಟತುರ್ಕ್ ಕಲ್ತೂರ್ ನಲ್ಲಿ 2019 ರ ಡಿಸೆಂಬರ್ 14 ರಿಂದ 16 ರವರೆಗೆ ನಡೆದ ಚಾಂಪಿಯನ್‌ಶಿಪ್‌ನಲ್ಲಿ, ವಿಶ್ವದ ಅತ್ಯುತ್ತಮ ತಂಡಗಳೊಂದಿಗೆ ಸ್ಪರ್ಧಿಸಿ ಮಕ್ಕಳ ಮತ್ತು ಮುಕ್ತ ವಿಭಾಗಗಳಲ್ಲಿ 6 ಚಿನ್ನ, 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಒಳಗೊಂಡಂತೆ 6 ಟ್ರೋಫಿಗಳನ್ನು ಮತ್ತು 9 ಪದಕಗಳನ್ನು ಗೆದ್ದು, ಹೊಸ ವಿಶ್ವ ದಾಖಲೆಗಳನ್ನು ಮಾಡಿದ್ದಾನೆ. ಮಗನ ಸಾಧನೆಯ ಬಗ್ಗೆ ಹೆಮ್ಮೆ ಪಡುವ ಜಯದಿತ್ಯ ಅವರ ತಂದೆ ಅವಿನಾಶ್ ಶೆಟ್ಟಿ ರೆಸ್ಟೋರೆಂಟ್ ನಡೆಸುತ್ತಿದ್ದು, ತಾಯಿ ಶ್ರೀಮತಿ ನವಾಝೇಶ ಶೆಟ್ಟಿ 15 ವರ್ಷಗಳ ಕಾಲ ಐಟಿಇಎಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದರು. ನಂತರ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಲು ಕೆಲಸಕ್ಕೆ ರಾಜೀನಾಮೆಯನ್ನಿತ್ತು ಮನೆವಾರ್ತೆ ನೋಡಿಕೊಳ್ಳುತ್ತಿದ್ದಾರೆ.
ಗುಜರಾತ್‌ನ ವಾಪಿ ಮೂಲದ ‘ಭಾರತದ ಮಾನಸಿಕ ಕ್ರೀಡೆಗಳ ಪ್ರವರ್ತಕ’ ಮತ್ತು ಅವರ ವಾರ್ಡ್‌ನೊಂದಿಗೆ ಕೆಲಸ ಮಾಡಿದ ಜಯದಿತ್ಯ ಅವರ ತರಬೇತುದಾರ ಆಧುನಿಕ ದ್ರೋಣಾಚಾರ್ಯ ಎಂದು ಕರೆಯಲ್ಪಡುವ ಶ್ರೀ ಯೂಸಿಬಿಯಸ್ ನೊರೊನ್ಹಾ. ಜಯದಿತ್ಯ ಕಲಿಕೆಗೆ ತೊಂದರೆಯಾಗದಂತೆ ವಾರಾಂತ್ಯದಲ್ಲಿ ಪಂದ್ಯಾವಳಿಗಳಿಗೆ ಮುಂಚಿತವಾಗಿ ವಾಪಿಗೆ ಪ್ರಯಾಣಿಸಿ ತರಬೇತಿ ಪಡೆಯುತ್ತಾನೆ. ಆದರೆ ಮಾನಸಿಕ ಕ್ರೀಡೆಗಳು ವಿಶ್ವದ ಇತರ ಭಾಗಗಳಲ್ಲಿ ಗುರುತಿಸಿಕೊಂಡಂತೆ, ಭಾರತದಲ್ಲಿ ಇದು ಬೇರೆ ಕ್ರೀಡೆಗಳಂತೆ ಗುರುತಿಸಲ್ಪಟ್ಟಿಲ್ಲ. ಹಾಗಾಗಿ ಸರ್ಕಾರದಿಂದ ಅಥವಾ ಇನ್ಯಾವುದೇ ಸಂಘ ಸಂಸ್ಥೆಗಳಿಂದ ಯಾವುದೇ ಬೆಂಬಲವನ್ನು ನಿರೀಕ್ಷಿಸುವಂತಿಲ್ಲ. ಮುಂದಿನ ದಿನಗಳಲ್ಲಿ ಜಯದಿತ್ಯನಿಗೆ ಮತ್ತಷ್ಟು ಪ್ರೋತ್ಸಾಹ ದೊರಕಿದಲ್ಲಿ ಈತ ಭಾರತದ ಮತ್ತೊಬ್ಬ ಆರ್ಯಭಟನಾಗುವುದರಲ್ಲಿ ಯಾವುದೇ ಸಂಶಯವಿಲ್ಲ.