ನವದೆಹಲಿ : ದೇಶದಲ್ಲಿ ಚೀನೀ ಆಪ್ ಗಳನ್ನು ನಿಷೇಧಿಸಬೇಕೆಂದು ಹಲವು ದಿನಗಳಿಂದ ದೇಶಾದ್ಯಂತ ಆಂದೋಲನದ ರೂಪದಲ್ಲಿ ಕೇಳಿಬರುತ್ತಿದ್ದ ಒತ್ತಾಯಕ್ಕೆ ಕೇಂದ್ರ ಸರ್ಕಾರ ಕೊನೆಗೂ ಸಮ್ಮತಿ ವ್ಯಕ್ತಪಡಿಸಿ ಚೀನಾದ 59 ಆಪ್ ಗಳನ್ನು ಅಧಿಕೃತವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ, ಈಗ ಚೀನಾಗೆ ಮತ್ತೊಂದು ಹೊಡೆತ ನೀಡಲು ಭಾರತ ಸಜ್ಜಾಗಿದೆ.
5ಜಿ ಉಪಕರಣಗಳಿಗೆ ನಿರ್ಬಂಧ
ಹೌದು..! ಈಗಾಗಲೇ ಚೀನಿ ಆಪ್ ಗಳನ್ನು ನಿಷೇಧಿಸಿ ಕೆಂಪು ದೇಶಕ್ಕೆ ಟಕ್ಕರ್ ನೀಡಿರುವ ಭಾರತ ಇದೀಗ ಚೀನಾದ 5ಜಿ ಉಪಕರಣಗಳನ್ನು ಕೂಡ ನಿರ್ಬಂಧಿಸಿ ಮತ್ತೊಂದು ಹೊಡೆತ ನೀಡಲು ಪ್ಲಾನ್ ಮಾಡಿಕೊಂಡಿದೆ. ಈ ವಿಚಾರವಾಗಿ ಆದೇಶ ಹೊರಡಿಸಲು ಸಚಿವರ ಉನ್ನತ ಮಟ್ಟದ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
5ಜಿ ಅನುಷ್ಠಾನಗೊಳಿಸಲು ಚೀನಾದ ಹುವೈ ಹಾಗೂ ಇತರ ಕಂಪನಿಗಳು ವಿವಿಧ ಉಪಕರಣಗಳನ್ನು ಪೂರೈಸುವಲ್ಲಿ ಮುಂಚೂಣಿಯಲ್ಲಿವೆ. ಈ ಕಂಪನಿಗಳ ಉಪಕರಣಗಳಿಗೆ ನಿರ್ಬಂಧ ವಿಧಿಸಲು ಸರಕಾರ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.