ಬೆಂಗಳೂರು: ಡ್ರಗ್ಸ್ ಪೂರೈಕೆ ಜಾಲದ ಬೆನ್ನುಬಿದ್ದಿರುವ ಎನ್‍ಸಿಬಿಗೆ ಮತ್ತೊಂದು ಮಿಕ ಬಲೆಗೆ ಬಿದ್ದಿದೆ. ಬೆಂಗಳೂರು ಸೇರಿದಂತೆ ಪೇಜ್-3 ಸೆಲಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಗೋವಾ ಮೂಲದ ಅಹ್ಮದ್ ಎಂಬಾತನನ್ನು ಎನ್‍ಸಿಬಿ ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ದೆಹಲಿ ಎನ್‍ಸಿಬಿ ಕಚೇರಿ, ಸ್ಯಾಂಡಲ್‍ವುಡ್‍ನ ನಟರಿಗೆ ಈತ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂದು ತಿಳಿಸಿದೆ.

ಬಂಧಿತನಿಂದ 3.5 ಕೆ.ಜಿ ಡ್ರಗ್ಸ್ ಮಾದರಿಯ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈತ ವಿದೇಶಗಳಿಂದ ಫಾರಿನ್ ಪೋಸ್ಟ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿರುವ ಬಗ್ಗೆ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಈತ ದೆಹಲಿಯಿಂದ ಮುಂಬೈ ಹಾಗೂ ಚೆನ್ನೈನಿಂದ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಈತ ಬೆಂಗಳೂರಿನ ಖಾಸಗಿ ರೆಸಾರ್ಟ್‍ನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನಂತೆ. ಚಾಲಕನಾಗಿದ್ದುಕೊಂಡೇ ಬೆಂಗಳೂರಿನ ಪ್ರಮುಖ ವ್ಯಕ್ತಿಗಳಿಗೆ ಡ್ರಗ್ಸ್ ಹಾಗೂ ಗಾಂಜಾ ಸರಬರಾಜು ಮಾಡುತ್ತಿದ್ದ.
ಈ ಡ್ರಗ್ಸ್‍ನ 1 ಗ್ರಾಂಗೆ 5 ಸಾವಿರ ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ವಶಪಡಿಸಿಕೊಂಡ ಡ್ರಗ್ಸ್ ಬೆಲೆ ಕೋಟಿಗೂ ಹೆಚ್ಚು ಬೆಲೆ ಇದೆ. ಈ ಡ್ರಗ್ಸ್‍ನ್ನು ಕೆನಡಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಗೋವಾಗೆ ಸರಬರಾಜು ಮಾಡುವ ಉದ್ದೇಶ ಹೊಂದಲಾಗಿತ್ತು ಎಂದು ಎನ್‍ಸಿಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.








