ಕನ್ನಡ ಚಿತ್ರರಂಗ ಮತ್ತೊಂದು ಅಪಾರ ನಷ್ಟವನ್ನು ಅನುಭವಿಸಿದೆ. ಹಿರಿಯ ನಟ ಮತ್ತು ಪ್ರಖ್ಯಾತ ಹಾಸ್ಯನಟರು ಬ್ಯಾಂಕ್ ಜನಾರ್ಧನ್ (ವಯಸ್ಸು 76) ಇಂದು ನಿಧನರಾಗಿದ್ದಾರೆ. ಅವರು ಬೆಂಗಳೂರಿನಲ್ಲಿ ಇಂದು ಮುಂಜಾನೆ 2.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
1948ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ತಮ್ಮ ಶಿಕ್ಷಣವನ್ನು ಕೂಡ ಇದೇ ನಗರದಲ್ಲಿ ಮುಗಿಸಿದ್ದರು. 1991ರಿಂದ ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಗುರುತನ್ನು ಬೆಳೆಸಿಕೊಂಡ ಅವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.
ಅವರ ಪ್ರತಿಭೆ ಸಿನಿಮಾ ಲೋಕಕ್ಕೆ ಮಾತ್ರ ಸೀಮಿತವಾಗದೆ, ಧಾರಾವಾಹಿ ಹಾಗೂ ರಂಗಭೂಮಿಯಲ್ಲಿಯೂ ವ್ಯಾಪಿಸಿತ್ತು. ಉಪೇಂದ್ರ ನಿರ್ದೇಶನದ ‘ಶ್’, ‘ತರ್ಲೆ ನನ್ ಮಗ’, ‘ಕೌರವ’ ಚಿತ್ರಗಳಲ್ಲಿ ಅವರು ನೀಡಿದ ಅಭಿನಯಕ್ಕೆ ಈಗಲೂ ಪ್ರೇಕ್ಷಕರು ಜೈ ಅಂತಾರೆ.
‘ಪಾಪಪಾಂಡು’, ‘ಮಾಂಗಲ್ಯ’, ‘ರೋಬೋ ಫ್ಯಾಮಿಲಿ’, ‘ಜೋಕಾಲಿ’ ಮೊದಲಾದ ಧಾರಾವಾಹಿಗಳಲ್ಲೂ ಅವರು ತಮ್ಮ ಹಾಸ್ಯದಿಂದ ಮನೆಮಾತಾಗಿದ್ದರು. ಅವರ ನಿಧನದಿಂದ ಕನ್ನಡ ಚಿತ್ರರಂಗವು ನಿಜಕ್ಕೂ ಒಬ್ಬ ಹಿರಿಯ ಕಲಾವಿದನನ್ನು ಕಳೆದುಕೊಂಡಿದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಧೈರ್ಯ ಸಿಕ್ಕಲಿ ಎಂಬುದು ನಮ್ಮ ಪ್ರಾರ್ಥನೆ.