ವಿಜಯಪುರ: ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಅಕ್ಕ ಮಹಾದೇವಿ ಮಹಿಳಾ ವಿವಿಯಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬಯಲಿಗೆ ಬಂದಿದೆ. ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ ದಯಾಮರಣಕ್ಕಾಗಿ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ವಿಶ್ವವಿದ್ಯಾಲಯದ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆಗೆ ಮಹಿಳಾ ವಿವಿಯ ಸಿಬ್ಬಂದಿ ಶ್ರೀಶೈಲ ದೊಡಮನಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಲೈಂಗಿಕ ಕಿರುಕುಳದ ಕುರಿತು ವಿವಿಯ ಆಂತರಿಕ ದೂರು ಸಮಿತಿಗೆ ಫೆ. 14 ರಂದು ಸಂತ್ರಸ್ತೆ ದೂರು ನೀಡಿದ್ದರು. ಆದರೆ ಆಂತರಿಕ ದೂರು ಸಮಿತಿ ಮಾತ್ರ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಇದೇ ವಿವಿಯ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ 2015ರಲ್ಲಿ ವಿವಿಯ ಆವರಣದ ತಡೆಗೋಡೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಮರಣದ ನಂತರ ಮಹಿಳೆಗೆ ಉದ್ಯಾನವನ ವಿಭಾಗದಲ್ಲಿ ಕೆಲಸ ಸಿಕ್ಕಿತ್ತು. ಮರಣದ ನಂತರ ಪಿಎಫ್ ಹಣ ನೀಡಿಲ್ಲ ಎಂದು ಕೂಡ ಮಹಿಳೆ ಆರೋಪ ಮಾಡಿದ್ದರು.
ಎಸ್ಸಿ, ಎಸ್ಟಿ ನೌಕರರ ಸಂಘದ ಪದಾಧಿಕಾರಿ ಸುಭಾಷ್ ಕಾಂಬಳೆ, ಹಣಕಾಸು ವಿಭಾಗದವರು ಸತಾಯಿಸುತ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಈಗ ಲೈಂಗಿಕ ಕಿರುಕುಳ, ಪಿಎಫ್ ಹಣ ನೀಡದೇ ಸತಾಯಿಸುತ್ತಿದ್ದಾರೆ ಎಂದು ಮಹಿಳೆ ಜಿಲ್ಲಾಧಿಕಾರಿ ಬಳಿ ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ.