ಗುವಾಹಟಿ : ಇಡೀ ಜಗತ್ತಿಗೇ ಕೊರೊನಾ ವೈರಸ್ ಸೋಂಕನ್ನು ಹಬ್ಬಿಸಿ ಜನಜೀವನವನ್ನು ಸಂಕಷ್ಟಕ್ಕೆ ನೂಕಿರುವ ಚೀನಾ ಇದೀಗ ಭಾರತಕ್ಕೆ ಇನ್ನೊಂದು ಆಘಾತ ನೀಡಿದೆ.
ಹಂದಿ ಜ್ವರ (ಸ್ವೈನ್? ಫ್ಲೂ) ಈಗಾಗಲೇ ಭಾರತಕ್ಕೂ ಕಾಲಿಟ್ಟು ಅನೇಕ ಪ್ರಾಣಗಳನ್ನು ಬಲಿಪಡೆದುಕೊಂಡಿದೆ. ಇದೀಗ, ಆಫ್ರಿಕನ್ ಹಂದಿ ಜ್ವರ (ಸ್ವೈನ್ ಫೀವರ್) ಎಂದು ಕರೆಯಲಾಗುವ ಹಂದಿಗಳ ಕಾಯಿಲೆ ಚೀನಾದಿಂದ ಶುರುವಾಗಿದ್ದು, ಭಾರತಕ್ಕೂ ಕಾಲಿಟ್ಟಿದೆ. ಅಸ್ಸಾಂನ 306 ಹಳ್ಳಿಗಳಲ್ಲಿನ ಹಂದಿಗಳಿಗೆ ಈ ಸೋಂಕು ತಲುಪಿದ್ದು, ಇದಾಗಲೇ ಎರಡೂವರೆ ಸಾವಿರಕ್ಕೂ ಅಧಿಕ ಹಂದಿಗಳು ಮೃತಪಟ್ಟಿವೆ.
ಈ ಜ್ವರ ಮನುಷ್ಯರಿಗೆ ತಗುಲುವ ಸಾಧ್ಯತೆ ಇಲ್ಲ ಎನ್ನುವುದೇ ಸಮಾಧಾನದ ಸಂಗತಿಯಾಗಿದೆ. ಆದರೆ ಹಂದಿ ಸಾಕಣೆ ಮಾಡುವವರಿಗೆ ಮಾತ್ರ ಈ ಜ್ವರ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಆಫ್ರಿಕನ್ ಹಂದಿ ಜ್ವರದ ಮೂಲ ಚೀನಾದ ಕ್ಸಿಜಾಂಗ್ ಪ್ರಾಂತ್ಯ. ಅರುಣಾಚಲ ಪ್ರದೇಶ ಮತ್ತು ಚೀನಾದ ಗಡಿ ಭಾಗದಲ್ಲಿ ಈ ಪ್ರದೇಶವಿದೆ. ಇಲ್ಲಿಯೇ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ ಎಂದು ಕೇಂದ್ರ ಪಶುಸಂಗೋಪನಾ ಸಚಿವ ಅತುಲ್ ಬೋರಾ ತಿಳಿಸಿದ್ದಾರೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, 2,500ಕ್ಕೂ ಅಧಿಕ ಹಂದಿಗಳು ಇದಕ್ಕೆ ಬಲಿಯಾಗಿವೆ. ಇದು ಅತ್ಯಂತ ಅಪಾಯಕಾರಿ ವೈರಸ್ ಆಗಿದೆ. ಆದರೆ ಸ್ವೈನ್ ಫ್ಲೂದಂತೆ (ಹಂದಿ ಜ್ವರ), ಆಫ್ರಿಕನ್ ಹಂದಿಜ್ವರ ಮನುಷ್ಯರಿಗೆ ಹರಡುವ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಆದ್ದರಿಂದ ಜನರು ಹೆದರುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.