ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಮತ್ತೊಂದು ವಾರ ಲಾಕ್‍ಡೌನ್ ಮುಂದುವರೆಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೇಲೆ ಒತ್ತಡ ತೀವ್ರಗೊಂಡಿದೆ.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಕುರಿತಂತೆ 8 ಕಂಟೈನ್‍ಮೆಂಟ್ ವಲಯಗಳ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸುತ್ತಿರುವ ಯಡಿಯೂರಪ್ಪ ಅವರ ಮುಂದೆ ಈ ಅಭಿಪ್ರಾಯ ವ್ಯಕ್ತವಾಗಿದೆ.
ಕೊರೊನಾ ಚೈನ್ ಲಿಂಕ್ ಕಟ್ ಮಾಡಬೇಕಾದರೆ ಒಂದು ವಾರದಲ್ಲಿ ಸಾಧ್ಯವಿಲ್ಲ. ಆಸ್ಪತ್ರೆ, ಬೆಡ್ ಸೇರಿದಂತೆ ಸ್ಕ್ರೀಮಿಂಗ್ ಕೆಲಸ ಮಾಡಿಕೊಳ್ಳಲು ಇನ್ನೂ ಒಂದು ವಾರದ ಅಗತ್ಯವಿದೆ. ಜತೆಗೆ ಕೊರೊನಾ ಇನ್ಕೂಬೇಶನ್‍ಗೆ ಕಡಿವಾಣ ಹಾಕಬೇಕಾದರೆ 14 ದಿನ ಲಾಕ್‍ಡೌನ್ ಮಾಡುವುದು ಅನಿವಾರ್ಯ ಎಂಬ ವಾದ ಸಚಿವರದ್ದಾಗಿದೆ. ಹೀಗಾಗಿ ಇನ್ನೂ ಒಂದು ವಾರ ಲಾಕ್‍ಡೌನ್ ಮಾಡುವುದು ಬಹುತೇಕ ಫಿಕ್ಸ್ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೂರು ದಿನಗಳ ಹಿಂದೆ ಅಂದರೆ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22ವರೆಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮಾಡಲಾಗಿದೆ. ಹೀಗಾಗಿ ಜುಲೈ ಅಂತ್ಯದವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಲಾಕ್‍ಡೌನ್ ವಿಸ್ತರಣೆಗೆ ಬಿಬಿಎಂಪಿ ಒತ್ತಡ
ಬೆಂಗಳೂರು ನಗರದಲ್ಲಿ ಇನ್ನೂ ಒಂದು ವಾರ ಲಾಕ್‍ಡೌನ್ ವಿಸ್ತರಣೆ ಮಾಡುವಂತೆ ಬಿಬಿಎಂಪಿ ಕೂಡ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದೆ. ಒಂದು ವಾರ ಲಾಕ್‍ಡೌನ್ ಮಾಡಿದ್ರೆ ಪ್ರಯೋಜನ ಇಲ್ಲ. ಇನ್ನೊಂದು ವಾರ ಲಾಖ್‍ಡೌನ್ ಮಾಡಬೇಕು. 15 ದಿನ ಲಾಕ್‍ಡೌನ್ ಮಾಡಿದರೆ ಕೊರೊನಾ ಚೈನ್‍ಲಿಂಕ್ ಕಟ್ ಮಾಡಲು ಲಾಕ್‍ಡೌನ್ ಅನಿವಾರ್ಯ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಅನಿಲ್ ಕುಮಾರ್ ಆಗ್ರಹಿಸಿದ್ದಾರೆ.








