ಬೆಂಗಳೂರು : ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಸುದ್ದಿಗೋಷ್ಟಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಡಿಸಿಎಂ, ಕೊರೊನಾ ಕಾರಣದಿಂದಾಗಿ ಈ ಬಾರಿ ಪರೀಕ್ಷೆ ಕೊಂಚ ವಿಳಂಬವಾಗಿ ನಡೆದಿದೆ. ಆದರೆ ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಸಿಇಟಿ ಪರೀಕ್ಷೆ ನಡೆದ ಕೇವಲ 21 ದಿನಗಳಲ್ಲಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷೆ ನಡೆದ ದಿನ ವರಮಹಾಲಕ್ಷ್ಮಿ ಹಬ್ಬವಿತ್ತು. ಇಂದು ಗೌರಿ ಹಬ್ಬಕ್ಕೆ ಫಲಿತಾಂಶ ನೀಡುತ್ತಿದ್ದೇವೆ ಎಂದ ಅಶ್ವಥ್ ಈ ಬಾರಿ ಸುಮಾರು 1,84,368 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಸಿಟಿ- 2020 ಬರೆದಿದ್ದರು. 1800 ಇತರ ರಾಜ್ಯಗಳ ವಿದ್ಯಾರ್ಥಿಗಳೂ ಕರ್ನಾಟಕದಲ್ಲಿ ಪರೀಕ್ಷೆ ಬರೆದಿದ್ದರು. ಇದರ ಹೊರತಾಗಿ 63 ಕೊರೊನಾ ಸೋಂಕಿತ ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲರಿಗೂ ಸೂಕ್ತವಾದ ವ್ಯವಸ್ಥೆ ಮಾಡಲಾಗಿತ್ತು. ಮೊದಲು 53 ಸ್ಥಳಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಕೊರೊನಾದಿಂದಾಗಿ ಈ ಬಾರಿ ಹೊಸದಾಗಿ 75 ಸೇರಿಸಿದ್ದೇವೆ. ಒಟ್ಟು 127 ಸ್ಥಳದಲ್ಲಿ ಪರೀಕ್ಷೆ ನಡೆದಿದೆ. 497 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು ಎಂದು ಎಂದು ವಿವರಿಸಿದರು.
ಸಿಇಟಿಗಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಬೇತಿ ನೀಡಿದ್ದೆವು. ಇದು ವಿದ್ಯಾರ್ಥಿಗಳ ನೆರವಿಗೆ ಬಂದಿದೆ. 4.2 ರೇಟಿಂಗ್ ಆಗಿರುವುದು ನಮ್ಮ ಸರ್ಕಾರದ ಹೆಮ್ಮೆ ಎಂದು ಅಶ್ವತ್ ನಾರಾಯಣ ಹೇಳಿದ್ದಾರೆ.
ಇನ್ನು ಜುಲೈ 30 ರಿಂದ ಆಗಸ್ಟ್ 1ರ ವರೆಗೆ ಸಿಇಟಿ ಪರೀಕ್ಷೆ ನಡೆದಿತ್ತು. ಇಂಜಿನಿಯರಿಂಗ್ ಗೆ 1,94,419 ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಅವರ ಪೈಕಿ 1,75,349 ಪರೀಕ್ಷೆ ಬರೆದಿದ್ದರು. ಇದರಲ್ಲಿ 1,53,470 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್ಗೆ ರ್ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸ್ಗೆ 1,27,627 ವಿದ್ಯಾರ್ಥಿಗಳಿಗೆ, ವೆಟರ್ನರಿ ಕೋರ್ಸ್ಗೆ 1,29,666, ಯೋಗ ಮತ್ತು ನ್ಯಾಚುರೋಪಥಿಗೆ 1,29,611 ಹಾಗೂ ಬಿ-ಫಾರ್ಮಾ- ಡಿ-ಫಾರ್ಮಾಕ್ಕೆ 1,55,552 ಮಂದಿಗೆ ರ್ಯಾಂಕ್ ನೀಡಲಾಗಿದೆ.








