ಏಷ್ಯಾ ಬಾಸ್ಕೆಟ್ಬಾಲ್ ಚಾಂಪಿಯನ್ ಶಿಪ್: ಆರನೇ ಬಾರಿಗೆ ಪ್ರಶಸ್ತಿ ಎತ್ತಿದ ಭಾರತ
ಭಾರತ ಪುರುಷರ ಬಾಸ್ಕೆಟ್ ಬಾಲ್ ತಂಡ ಬಾಂಗ್ಲಾದೇಶದಲ್ಲಿ ನಡೆದ ದಕ್ಷಿಣ ಏಷ್ಯಾ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡಿದೆ.
ಶುಕ್ರವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ 106-41 ರಿಂದ ಆತಿಥೇಯ ಬಾಂಗ್ಲಾ ತಂಡವನ್ನು ಮಣಿಸಿತು.
ಈ ಪ್ರಶಸ್ತಿಯನ್ನು ಭಾರತ ಆರನೇ ಬಾರಿಗೆ ಮುಡಿಗೇರಿಸಿಕೊಂಡಿದೆ. ಈ ಮೊದಲು 2002, 2014, 2015, 2016, 2017ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
ವಿಶೇಷ ಭೃಗುವಂಶಿ ಮುಂದಾಳತ್ವದ ವಿಜೇತ ತಂಡ ಮೊದಲಾವಧಿಯಲ್ಲೇ 33-11 ಮುನ್ನಡೆ ಸಾಧಿಸಿತು.
ಎರಡನೇ ಹಾಗೂ ಮೂರನೇ ಅವಧಿಯಲ್ಲೂ ಅಂಕಗಳನ್ನು ಕಲೆ ಹಾಕಿದ ಭಾರತ ತನ್ನ ಖಾತೆಗೆ 54 ಅಂಕ ಸೇರಿಸಿತು. ಬಾಂಗ್ಲಾ 21 ಅಂಕ ಕಲೆ ಹಾಕಿತು. ಕೊನೆಯ ಅವಧಿಯಲ್ಲೂ ಅಮೋಘ ಪ್ರದರ್ಶನ ನೀಡಿದ ಭಾರತ ಜಯ ಸಾಧಿಸಿತು.
ಎಂಟನೇ ಆವೃತ್ತಿಯ ಟೂರ್ನಿಯನ್ನು ದಕ್ಷಿಣ ಏಷ್ಯಾ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಆಯೋಜಿಸಿತ್ತು.
ಫೈನಲ್ ಗೂ ಮುನ್ನ ಭಾರತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಶ್ರೀಲಂಕಾ ವಿರುದ್ಧ ಎರಡು, ಮಾಲ್ಡೀವ್ಸ್ ವಿರುದ್ಧ ಗೆಲುವು ದಾಖಲಿಸಿತ್ತು.