ಐಪಿಎಲ್ ನ 40ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ತಂಡ ಕೊನೆಯ ಓವರ್ ನಲ್ಲಿ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿರುವ ಡೆಲ್ಲಿ ನಾಯಕ ರಿಷಭ್ ಪಂತ್ ವಿಶೇಷ ಮೈಲುಗಲ್ಲು ಸಾಧಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಪರ ರಿಷಭ್ ಪಂತ್ 43 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 88 ರನ್ ಗಳಿಸಿದ್ದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯಧಿಕ ಅರ್ಧಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ರಿಷಬ್ ಬರೆದಿದ್ದಾರೆ.
ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಆಟಗಾರ ಶಿಖರ್ ಧವನ್ ಹೆಸರಿನಲ್ಲಿ ಈ ದಾಖಲೆ ಇತ್ತು. ಡೆಲ್ಲಿ ಪರ 63 ಪಂದ್ಯಗಳನ್ನಾಡಿರುವ ಧವನ್ 18 ಅರ್ಧ ಶತಕ ಸಿಡಿಸಿದ್ದರು. ತಂಡದ ಪರ 106ನೇ ಇನ್ನಿಂಗ್ಸ್ ಆಡಿರುವ ಪಂತ್ 19ನೇ ಅರ್ಧಶತಕ ಸಿಡಿಸಿ ದಾಖಲೆ ಮುರಿದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಹೆಚ್ಚಿನ ಅರ್ಧಶತಕ ಸಿಡಿಸಿರುವ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ವಾರ್ನರ್ ಇಲ್ಲಿಯವರೆಗೆ 89 ಇನಿಂಗ್ಸ್ ಗಳಲ್ಲಿ ಆಡಿ 24 ಅರ್ಧ ಶತಕ ಸಿಡಿಸಿದ್ದಾರೆ. ಈಗ 19 ಅರ್ಧಶತಕಗಳಿಂದ ರಿಷಭ್ ದ್ವಿತೀಯ ಸ್ಥಾನದಲ್ಲಿದ್ದಾರೆ.