ಬೆಂಗಳೂರು: ತವರು ನೆಲದಲ್ಲಿ ಆರ್ ಸಿಬಿಗೆ ಮತ್ತೊಮ್ಮೆ ಮುಖಭಂಗವಾಗಿದೆ. ಆರ್ ಸಿಬಿ ವಿರುದ್ಧ ಹೈದರಾಬಾದ್ ತಂಡ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಹೈದರಾಬಾದ್ ತಂಡ ನಿಗದಿತ ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು. ಬೃಹತ್ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 262 ರನ್ ಗಳಿಸಿ, 25 ರನ್ ಗಳಿಂದ ಸೋಲು ಕಂಡಿದೆ. ಆರ್ ಸಿಬಿ ಕೂಡ ಒಂದು ಹಂತದಲ್ಲಿ ಹೋರಾಡಿ ಸೋತಿತು ಅಂತಾನೇ ಹೇಳಬಹುದು. ದಿನೇಶ್ ಕಾರ್ತಿಕ್ ಕೊನೆಯವರೆಗೂ ಹೋರಾಟ ನಡೆಸಿದರು. ನಾಯಕ ಡುಪ್ಲೆಸಿಸ್ ಕೂಡ ಉತ್ತಮ ಆಟ ಪ್ರದರ್ಶಿಸಿದರು.
ಇತ್ತೀಚೆಗಷ್ಟೇ ತಂಡವೊಂದರ ಅತ್ಯಧಿಕ ರನ್ ಎಂಬ ದಾಖಲೆ ಬರೆದಿದ್ದ ಹೈದರಾದ್ ಕೆಲವೇ ದಿನಗಳಲ್ಲಿ ತನ್ನ ದಾಖಲೆಯನ್ನು ತಾನೇ ಮುರಿದಿದೆ. ಮುಂಬೈ ತಂಡದ ವಿರುದ್ಧ ಹೈದರಾದ್ ತಂಡ 277 ರನ್ ಗಳಿಸಿತ್ತು. ಹೈದರಾಬಾದ್ ತಂಡ ಆರಂಭದಿಂದ ಕೊನೆಯವರೆಗೂ ಉತ್ತಮ ಆಟ ಪ್ರದರ್ಶಿಸಿತು.
ಆರ್‌ಸಿಬಿ ಪರ ಕೊಹ್ಲಿ 20 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು. 4 ಎಸೆತಗಳಲ್ಲಿ 7 ರನ್ ಗಳಿಸಿದ ವಿಲ್ ಜಾಕ್ವೆಸ್ ಮತ್ತೊಂದು ರನ್ ಗಳಿಸುವ ಯತ್ನದಲ್ಲಿ ರನ್ ಔಟ್ ಆದರು. ಸೌರವ್ ಚೌಹಾಣ್ ಕೇವಲ ಒಂದೇ ಎಸೆತಕ್ಕೆ ಡಕ್ ಔಟ್ ಆಗಿ ಫೆವಲಿಯನ್ ಸೇರಿದರು.
ರಜತ್ ಪಾಟಿದಾರ್ 5 ಎಸೆತಗಳಲ್ಲಿ 9 ರನ್ ಕಲೆ ಹಾಕಿದರು. ನಾಯಕ ಫಾಫ್ ಡುಪ್ಲೆಸಿಸ್ 28 ಎಸೆತಗಳಲ್ಲಿ 7 ಬೌಂಡರಿ 4 ಸಿಕ್ಸ್ ಸಿಡಿಸಿ 62 ರನ್ ಗಳಿಸಿದರು. 35 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 5 ಬೌಂಡರಿ ಸಿಡಿಸಿದ ದಿನೇಶ್ ಕಾರ್ತಿಕ್ 83 ರನ್ ಗಳಿಸಿ ಶತಕ ವಂಚಿತರಾದರು. ನಾಯಕ ಹಾಗೂ ದಿನೇಶ್ ಕಾರ್ತಿಕ್ ಅವರ ಹೋರಾಟ ಕೊನೆಗೂ ವ್ಯರ್ಥವಾಯಿತು.
ಹೈದರಾಬಾದ್ ತಂಡದ ಪರ ಟ್ರಾವಿಸ್ ಹೆಡ್ 39 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಐಪಿಎಲ್ ನಲ್ಲಿ ನಾಲ್ಕನೇ ವೇಗದ ಶತಕವಾಗಿದೆ. ಹೆನ್ರಿಚ್ ಕ್ಲಾಸೆನ್, 31 ಎಸೆತಗಳಲ್ಲಿ 67 ರನ್ ಗಳಿಸಿದರೆ, ಅಬ್ದುಲ್ ಸಮದ್ 10 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸ್ ಸಿಡಿಸಿ 37 ರನ್ ಗಳಿಸಿ ರನ್ ವೇಗ ಹೆಚ್ಚಿಸಿದರು.