ಈ ವರ್ಷ ಮಕ್ಕಳಿಗೆ ಹಾಜರಾತಿ ಕಡ್ಡಾಯ ಇಲ್ಲ : ಬಿ.ಸಿ.ನಾಗೇಶ್
ಯಾವ ಮಕ್ಕಳಿಗೂ ಶಾಲೆಗೆ ಬರಲು ಬಲವಂತ ಇಲ್ಲ
ಪರೀಕ್ಷೆಗೂ 75% ಹಾಜರಾತಿ ಕಡ್ಡಾಯ ಮಾಡುವುದಿಲ್ಲ
ಚಂದನ ವಾಹಿನಿಯಲ್ಲಿ ತರಗತಿ ಮುಂದುವರೆಯುತ್ತದೆ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿಕೆ
ಬೆಂಗಳೂರು : ಶಾಲಾ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ, ಯಾವ ಮಕ್ಕಳಿಗೂ ಶಾಲೆಗೆ ಬರಲು ಬಲವಂತ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಬುಧವಾರ ಕೊಡಗಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ವರ್ಷ ಮಕ್ಕಳಿಗೆ ಹಾಜರಾತಿ ಕಡ್ಡಾಯ ಇಲ್ಲ. ಯಾವ ಮಕ್ಕಳಿಗೂ ಶಾಲೆಗೆ ಬರಲು ಬಲವಂತ ಇಲ್ಲ. ಪರೀಕ್ಷೆಗೂ 75% ಹಾಜರಾತಿ ಕಡ್ಡಾಯ ಮಾಡುವುದಿಲ್ಲ ಎಂದು ತಿಳಿಸಿದರು. ಅಲ್ಲದೇ ಎಸ್‍ಎಸ್‍ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯುತ್ತದೆ. ಪೂರ್ಣ ಪ್ರಮಾಣದ ಆಫ್‌ಲೈನ್ ತರಗತಿ ಪ್ರಾರಂಭ ಆಗುವವರೆಗೂ ಚಂದನ, ಆಕಾಶವಾಣಿಯಲ್ಲಿ ಪಠ್ಯ ಬೋಧನೆ ಮುಂದುವರೆಯುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಬೆಂಗಳೂರಿನಲ್ಲಿ ಶಾಲಾಗಳು ಆರಂಭಿಸುವ ಬಗ್ಗೆ ಮಾತನಾಡಿ ಸಚಿವರು, ಈ ಬಗ್ಗೆ ತಜ್ಞರ ಸಲಹೆ ಮೇರೆಗೆ ಶಾಲೆ ಆರಂಭದ ಕುರಿತು ನಿರ್ಧಾರ ಮಾಡುತ್ತೇವೆ. ಶುಕ್ರವಾರ ನಡೆಯುವ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗುವುದು. ತಜ್ಞರು ಒಪ್ಪಿಗೆ ನೀಡಿದರೆ ಸೋಮವಾರದಿಂದ ಶಾಲೆ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.