ಟ್ರಾವಿಸ್ ಹೆಡ್(109) ಅವರ ಭರ್ಜರಿ ಶತಕ, ಡೇವಿಡ್ ವಾರ್ನರ್(81) ಅವರ ಅರ್ಧಶತಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 388 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಇದರ ಪರಿಣಾಮ 49.2 ಓವರ್‌ಗಳಲ್ಲಿ 388/10 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಆಸೀಸ್ ಪರ ಟ್ರಾವಿಸ್ ಹೆಡ್(109), ವಾರ್ನರ್(81), ಮ್ಯಾಕ್ಸ್‌ವೆಲ್(41), ಇಂಗ್ಲಿಸ್(38) ಹಾಗೂ ಕಮ್ಮಿನ್ಸ್(37) ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು.

ಹೆಡ್-ವಾರ್ನರ್ ಅದ್ಭುತ ಆಟ:
ಆಸ್ಟ್ರೇಲಿಯಾ ಪರ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್(81 ರನ್, 65 ಬಾಲ್, 5 ಬೌಂಡರಿ, 6 ಸಿಕ್ಸ್) ಹಾಗೂ ಟ್ರಾವಿಸ್ ಹೆಡ್(109 ರನ್, 67 ಬಾಲ್, 10 ಬೌಂಡರಿ, 7 ಸಿಕ್ಸ್) ಅದ್ಭುತ ಆಟವಾಡಿದರು. ಇನ್ನಿಂಗ್ಸ್‌ನ ಆರಂಭದಿಂದಲೇ ನ್ಯೂಜಿ಼ಲೆಂಡ್ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಿದ ಈ ಜೋಡಿ 19.1 ಓವರ್‌ಗಳಲ್ಲಿ 175 ರನ್‌ಗಳ ಅತ್ಯುತ್ತಮ ಆರಂಭಿಕ ಜೊತೆಯಾಟದಿಂದ ತಂಡಕ್ಕೆ ಸುಭದ್ರ ಅಡಿಪಾಯ ಹಾಕಿಕೊಟ್ಟರು. ಕಿವೀಸ್ ಬೌಲರ್‌ಗಳನ್ನ ಮನಬಂದಂತೆ ದಂಡಿಸಿದ ಟ್ರಾವಿಸ್ ಹೆಡ್, ತಮ್ಮ ಚೊಚ್ಚಲ ಏಕದಿನ ವಿಶ್ವಕಪ್ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದರು.

ಆಸೀಸ್ ಅಬ್ಬರದ ಬ್ಯಾಟಿಂಗ್:
ವಾರ್ನರ್ ಹಾಗೂ ಹೆಡ್ ಅವರು ನೀಡಿದ ಉತ್ತಮ ಆರಂಭದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಆಸೀಸ್‌ನ ಇತರೆ ಬ್ಯಾಟರ್‌ಗಳು ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪ್ರಮುಖವಾಗಿ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(41), ಜೋಶ್ ಇಂಗ್ಲಿಸ್(38), ನಾಯಕ ಪ್ಯಾಟ್ ಕಮ್ಮಿನ್ಸ್(37) ಹಾಗೂ ಮಿಚೆಲ್ ಮಾರ್ಷ್(36) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಪ್ರಮುಖ ಬ್ಯಾಟರ್‌ಗಳಾದ ಸ್ಟೀವ್ ಸ್ಮಿತ್(18) ಹಾಗೂ ಮಾರ್ನಸ್ ಲಬುಶೇನ್(18) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಬಳಿಕ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟಾರ್ಕ್(1), ಜ್ಹಂಪ(0) ಹಾಗೂ ಹೇಜ಼ಲ್ವುಡ್(0*) ನಿರೀಕ್ಷಿತ ಆಟವಾಡದ ಪರಿಣಾಮ 49.2 ಓವರ್‌ಗಳಲ್ಲಿ 388 ರನ್‌ಗಳಿಗೆ ಆಲೌಟ್ ಆಯಿತು.

ಫಿಲಿಪ್ಸ್ ಉತ್ತಮ ದಾಳಿ:
ಕಿವೀಸ್ ಪರ ಗ್ಲೆನ್ ಫಿಲಿಪ್ಸ್(3/37) ಹಾಗೂ ಟ್ರೆಂಟ್ ಬೋಲ್ಟ್(3/77) ಉತ್ತಮ ಬೌಲಿಂಗ್ ಪ್ರದರ್ಶಿಸಿದರೆ. ಸ್ಯಾಂಟ್ನರ್ 2, ಹೆನ್ರಿ ಹಾಗೂ ನೀಶಮ್ ತಲಾ 1 ವಿಕೆಟ್ ಪಡೆದುಕೊಂಡರು. ಪ್ರಸಕ್ತ ವಿಶ್ವಕಪ್‌ನಲ್ಲಿ ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲೂ ಮಿಂಚಿದ್ದ ನ್ಯೂಜಿ಼ಲೆಂಡ್, ಇಂದಿನ ಪಂದ್ಯದಲ್ಲಿ ಫೀಲ್ಡಿಂಗ್‌ನಲ್ಲಿ ದೊಡ್ಡ ವೈಫಲ್ಯ ಕಂಡಿತು. ಆಸೀಸ್ ತಂಡದ ಪ್ರಮುಖ ಬ್ಯಾಟರ್‌ಗಳ ನಾಲ್ಕು ಕ್ಯಾಚ್‌ಗಳನ್ನ ಕೈಚಲ್ಲಿದ್ದು ಕಿವೀಸ್‌ಗೆ ದೊಡ್ಡ ಹೊಡೆತ ನೀಡಿತು.
AUS v NZ, Australia, New Zealand, CWC 2023, ODI Cricket








