Covid Guidelines – ರಾಜ್ಯಗಳಿಗೆ ನೂತನ ಕೋವಿಡ್ ಮಾರ್ಗಸೂಚಿ ಹೊರಡಿಸಿದ ಕೇಂದ್ರ…
ದೇಶಾದ್ಯಂತ ಕರೋನವೈರಸ್ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶುಕ್ರವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೂತನ ಕೋವಿಡ್ ಮಾರ್ಗ ಸೂಚಿಗಳನ್ನ ಹೊರಡಿಸಿದೆ.
ಅಲ್ಲದೆ 2022 ರ ಸ್ವಾತಂತ್ರ್ಯ ದಿನದಂದು ಬೃಹತ್ ಸಮಾರಂಭಗಳನ್ನ ತಪ್ಪಿಸುವಂತೆ ಕೇಳಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ 15,000 ಕ್ಕೂ ಹೆಚ್ಚು ಕರೋನವೈರಸ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹಾಗಾಗಿ ಕೇಂದ್ರ ಸರ್ಕಾರ ಎಲ್ಲರಿಗೂ ಕೋವಿಡ್ ಪ್ರೋಟೋಕಾಲ್ಗಳನ್ನು ಅನುಸರಿಸುವಂತೆ ಕೇಳಿದೆ.
ಇದಲ್ಲದೆ, ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರತಿ ಜಿಲ್ಲೆಯ ಪ್ರಮುಖ ಸ್ಥಳದಲ್ಲಿ ‘ಸ್ವಚ್ಛ ಭಾರತ’ ಅಭಿಯಾನವನ್ನು ಕೈಗೊಳ್ಳಲು ಮತ್ತು ಹದಿನೈದು ಅಥವಾ ತಿಂಗಳ ಅವಧಿಯ ಅಭಿಯಾನವನ್ನ ಕೈಗೊಳ್ಳಲು ತಿಳಿಸಿದೆ.
ಭಾರತದಲ್ಲಿ ಇಂದು 16,561 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,42,23,557 ಕ್ಕೆ ತಲುಪಿದೆ, ಆದರೆ ಸಕ್ರಿಯ ಪ್ರಕರಣಗಳು 1,23,535 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯು ಶುಕ್ರವಾರ ನವೀಕರಿಸಿದೆ. 49 ಸಾವುಗಳೊಂದಿಗೆ ಸಾವಿನ ಒಟ್ಟು ಸಂಖ್ಯೆ 5,26,928 ಕ್ಕೆ ಏರಿಕೆಯಾಗಿದೆ. ಇದರಲ್ಲಿ 10 ಸಾವುಗಳು ಕೇರಳದಲ್ಲಿ ವರದಿಯಾಗಿದೆ.