ಆಯುರ್ವೇದಿಕ್ ಮೌಲ್ಯಗಳಿರುವ ಪುಟ್ಟ ಸಸ್ಯ ಜಲಹಿಪ್ಪಲಿ ಆರೋಗ್ಯ ಪ್ರಯೋಜನಗಳು

1 min read

ಆಯುರ್ವೇದಿಕ್ ಮೌಲ್ಯಗಳಿರುವ ಪುಟ್ಟ ಸಸ್ಯ ಜಲಹಿಪ್ಪಲಿ ಆರೋಗ್ಯ ಪ್ರಯೋಜನಗಳು

ಜಲಹಿಪ್ಪಲಿ ಎನ್ನುವ ಅದ್ಭುತ ಆಯುರ್ವೇದಿಕ್ ಮೌಲ್ಯಗಳಿರುವ ಪುಟ್ಟ ಸಸ್ಯದ ಮಹಿಮೆ ಮಾತ್ರ ಅಪಾರ. ಇವು ಸಾಮಾನ್ಯವಾಗಿ ತೇವಾಂಶವಿರುವ ಕೆರೆಯ ಬದುಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿರುತ್ತವೆ. ಫೈಲಾ ನೋಡಿಫ್ಲೋರಾ (Phyla nodiflora) ಎನ್ನುವುದು ಜಲಹಿಪ್ಪಲಿಯ ವೈಜ್ಞಾನಿಕ ಹೆಸರು. ಇದನ್ನು ಫ್ರಾಗ್ ಫ್ರೂಟ್ (Frog fruit), ಟರ್ಕಿ ಟ್ಯಾಂಗಲ್ (Turkey tangle), ವೈಲ್ಡ್ ಲಾಂಗ್ ಪೆಪ್ಪರ್ (wild long pepper) ಎಂದು ಕರೆಯುತ್ತಾರೆ. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಜಲಹಿಪ್ಪಲಿಗೆ ನೀರು ಹಿಪ್ಪಲಿ, ನೆಲಹಿಪ್ಪಲಿ, ಕೆರೆಹಿಪ್ಪಲಿ, ನೀರ್ ಪಿಪ್ಲಿ ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ.

ಅತ್ಯಂತ ಮಹತ್ವದ ಔಷದೀಯ ಗುಣಗಳನ್ನು ಹೊಂದಿರುವ ಜಲಹಿಪ್ಪಲಿಯ ಎಲೆಯನ್ನು ಚಹಾ ಮಾಡಿ ಕುಡಿದರೆ ದೇಹದ ಹೆಚ್ಚುವರಿ ಉಷ್ಣಾಂಶವನ್ನು ನಿಯಂತ್ರಿಸಿ ದೇಹವನ್ನು ತಂಪಾಗಿಸುತ್ತದೆ. ಇದರಿಂದ ಅನೇಕ ಉದರ ಸಂಬಂಧಿ ರೋಗಗಳು ನಿವಾರಣೆಯಾಗುತ್ತದೆ. ಜಲಹಿಪ್ಪಲಿಯ ಸಮೂಲ ಕಷಾಯ ಜ್ವರ, ಕೆಮ್ಮು, ಕಫ ಮುಂತಾದ ಸಣ್ಣ ಪುಟ್ಟ ಕಾಯಿಲೆಗಳಿಗೂ ರಾಮಭಾಣ. ಇದರ ಬೇರಿನ ಕಷಾಯ ಅಥವಾ ಚೂರ್ಣವನ್ನು ನಿಯಮಿತವಾಗಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ವಸಡಿನ ಸಮಸ್ಯೆ ಇರುವವರು ಇದರ ತಾಜಾ ಎಲೆಗಳನ್ನು ಬಾಯಿಯಲ್ಲಿ ಅಗಿದು ಬಿಸಿನೀರಿನಲ್ಲಿ ಬಾಯಿ ಮುಕ್ಕಳಿಸಿದರೇ ವಸಡಿನ ರಕ್ತಸ್ರಾವ ಶಮನವಾಗುತ್ತದೆ. ಈ ಸಸ್ಯದ ಕಷಾಯ ಅಲ್ಸರ್ ಸಮಸ್ಯೆಗೂ ಅತ್ಯುತ್ತಮ ಪರಿಹಾರವಾಗಿದೆ.

ಇಷ್ಟೇ ಅಲ್ಲ ಅತ್ಯಂತ ಉತ್ಕೃಷ್ಟ ಔಷದೀಯ ಗುಣ ಹೊಂದಿರುವ ಈ ಪುಟ್ಟ ಸಸ್ಯ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಜೀರ್ಣ, ಹೊಟ್ಟೇನೋವು, ಜಂತುಹುಳ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಬಾಣಂತಿಯರಿಗೆ ಇದರ ಸಮೂಲ ಕಷಾಯ ಕುಡಿಸಿದರೇ ಅಜೀರ್ಣದ ಸಮಸ್ಯೆ ನಿವಾರಣೆಯಾಗಿ ದೇಹವನ್ನು ಬೆಚ್ಚಗಿಡುತ್ತದೆ. ನಿತ್ಯವೂ ಜಲಹಿಪ್ಪಲಿಯ ತಾಜಾ ಎಲೆಗಳನ್ನು ಹಸಿಯಾಗಿ ಅಗಿದು ತಿಂದರೇ ಮೂಲವ್ಯಾಧಿಯಂತಹ ಸಮಸ್ಯೆಗಳು ಉಪಶಮನವಾಗುತ್ತದೆ. ಈ ಸಸ್ಯದ ಎಲೆಗಳನ್ನು ಅರೆದು ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದರೇ ತುರಿಕೆ, ತುರಿಕಜ್ಜಿ, ದಡಾರಗಳಂತಹ ಚರ್ಮರೋಗಗಳು ವಾಸಿಯಾಗುತ್ತವೆ. ಇನ್ನು ಇದರ ಎಲೆಗಳನ್ನು ದ್ರವ್ಯದ ರೂಪದಲ್ಲಿ ತಲೆಗೆ ಹಚ್ಚುವುದರಿಂದ ಮಹಿಳೆಯರಲ್ಲಿ ಹಾಗೂ ಪುರುಷರಲ್ಲಿಯೂ ತಲೆಹೊಟ್ಟಿನ ಸಮಸ್ಯೆ ಇದ್ದರೆ ದೂರವಾಗುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd