100 ಕೋಟಿ ಲಸಿಕೆ ಕೊಟ್ಟಿರುವುದು ಮೊದಲ ಡೋಸ್ ಮಾತ್ರ
ಬೆಂಗಳೂರು : ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನದಡಿ ಈ ವರೆಗೂ 100 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ಸೋಶಿಯಲ್ ಮೀಡಿಯಾ ಮೂಲಕ ಖುಷಿ ಹಂಚಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ಈ ವಿಚಾರವಾಗಿ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
ಪ್ರಧಾನಿಗಳು, ಆರೋಗ್ಯ ಸಚಿವರು 100 ಕೋಟಿ ಲಸಿಕೆ ನೀಡಿದ್ದಾಗಿ ಸಂಭ್ರಮಿಸುತ್ತಿದ್ದಾರೆ. ಕೋವಿಡ್ ನಿಂದಾಗಿ ದೇಶದ ನಾಗರೀಕರು ಪ್ರತ್ಯಕ್ಷವಾಗಿ – ಪರೋಕ್ಷವಾಗಿ ಒಂದಲ್ಲಾ ಒಂದು ರೀತಿಯ ಸಂಕಷ್ಟ ಅನುಭವಿಸಿದ್ದಾರೆ. ಲಕ್ಷಾಂತರ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನ ಕಳೆದುಕೊಂಡಿವೆ. ಹಾಗಾಗಿ ಇದು ಸಂಭ್ರಮಿಸುವ ವಿಚಾರವಲ್ಲ.
ಆರೋಗ್ಯ ಸಚಿವರ ಮಾಹಿತಿಯಂತೆ 100 ಕೋಟಿ ಲಸಿಕೆ ಕೊಟ್ಟಿರುವುದು ಮೊದಲ ಡೋಸ್ ಮಾತ್ರ. 70 ಕೋಟಿ ಜನರಿಗೆ ಮೊದಲ, 20-30 ಕೋಟಿ ಜನರಿಗೆ 2ನೇ ಡೋಸ್ ನೀಡಲಾಗಿದೆ. ಲಸಿಕೆ ಉತ್ಪಾದನೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನ ಪಡೆದಿರುವ ಭಾರತದಲ್ಲಿ ಇಷ್ಟು ದಿನಗಳಲ್ಲಿ ಕೇವಲ ಒಂದು ಡೋಸ್ ಮಾತ್ರ ನೀಡಲಾಗಿದೆ. ಇದು ಸಂಭ್ರಮಿಸುವ ವಿಚಾರವೇ ಎಂದು ಪ್ರಶ್ನಿಸಿದ್ದಾರೆ.