ಏಷ್ಯಾಕಪ್-2023 ಟೂರ್ನಿಗೆ ಭರ್ಜರಿ ಆರಂಭ ಲಭಿಸಿದ್ದು, ನೇಪಾಳದ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲೇ ಪಾಕಿಸ್ತಾನದ ನಾಯಕ ಬಾಬರ್ ಆಜಂ ಹಾಗೂ ಇಫ್ತಿಕರ್ ಅಹ್ಮದ್, ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಏಕದಿನ ಕ್ರಿಕೆಟ್‌ನ ಹಲವು ದಾಖಲೆಗಳನ್ನ ಮುರಿದಿದ್ದಾರೆ.
ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಈ ಇಬ್ಬರು ತಮ್ಮ ಅತ್ಯುತ್ತಮ ಪ್ರದರ್ಶನದಿಂದ ತಂಡದ ಗೆಲುವಿನಲ್ಲಿ ಮಿಂಚಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಆಜಂ, 131 ಎಸೆತಗಳಲ್ಲಿ 151 ರನ್‌ಗಳಿಸಿ ಅಬ್ಬರಿಸಿದರೆ. ಇಫ್ತಿಕರ್ ಅಹ್ಮದ್, 71 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 109 ರನ್‌ಗಳಿಸಿ ಶತಕದ ಸಂಭ್ರಮ ಆಚರಿಸಿದರು. ಇವರಿಬ್ಬರ ಈ ಪ್ರದರ್ಶನದ ನೆರವಿನಿಂದ 342 ರನ್‌ಗಳಿಸಿದ ಪಾಕಿಸ್ತಾನ, ಬಳಿಕ ನೇಪಾಳ ತಂಡವನ್ನ 104 ರನ್‌ಗಳಿಕೆ ಆಲೌಟ್ ಮಾಡುವ ಮೂಲಕ 238 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆದರೆ ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಬಾಬರ್ ಆಜಂ ಹಾಗೂ ಇಫ್ತಿಕರ್ ಅಹ್ಮದ್, ಏಕದಿನ ಕ್ರಿಕೆಟ್‌ನ ಹಲವು ದಾಖಲೆಗಳನ್ನ ಮುರಿದಿದ್ದಾರೆ.
ಬಾಬರ್ ಆಜಂ:
ಪಾಕಿಸ್ತಾನದ ನಾಯಕ ಬಾಬರ್ ಅಜಂ, ನೇಪಾಳ ವಿರುದ್ಧ ಗಳಿಸಿದ 151 ರನ್, ಏಷ್ಯಾಕಪ್ ODI ಇತಿಹಾಸದಲ್ಲಿ ಪಾಕಿಸ್ತಾನಿ ಬ್ಯಾಟರ್ ಕಲೆಹಾಕಿದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಈ ಹಿಂದೆ 2004ರಲ್ಲಿ ಹಾಂಗ್ ಕಾಂಗ್ ವಿರುದ್ಧ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಯೂನಿಸ್ ಖಾನ್, 144 ರನ್‌ಗಳಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇನ್ನೂ ಏಷ್ಯಾಕಪ್‌ನ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಂತರದಲ್ಲಿ ವೈಯಕ್ತಿಕ 150ಕ್ಕೂ ಹೆಚ್ಚು ರನ್‌ಗಳಿಸಿದ ಎರಡನೇ ಬ್ಯಾಟರ್ ಎನಿಸಿದ್ದಾರೆ. ಈ ಹಿಂದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಕೊಹ್ಲಿ, 2012ರಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 183 ರನ್‌ಗಳಿಸಿದ್ದರು.
ಇದಷ್ಟೇ ಅಲ್ಲದೇ ಪಾಕ್ ನಾಯಕ ಬಾಬರ್ ಆಜಂ, ಟೀಂ ಇಂಡಿಯಾದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದಿದ್ದಾರೆ. ಏಷ್ಯಾ ಕಪ್‌ನ ಏಕದಿನ ಪಂದ್ಯದಲ್ಲಿ ನಾಯಕನಾಗಿ ಗರಿಷ್ಠ ವೈಯಕ್ತಿಕ ಸ್ಕೋರ್ ಹೊಂದಿದ್ದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಬಾಂಗ್ಲಾದೇಶದ ವಿರುದ್ಧ 2014ರಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 136 ರನ್‌ಗಳಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಆದರೆ ನೇಪಾಳ ವಿರುದ್ಧದ ಪಂದ್ಯದಲ್ಲಿ 151 ರನ್‌ಗಳಿಸುವ ಮೂಲಕ ಬಾಬರ್ ಈ ದಾಖಲೆ ಮುರಿದಿದ್ದಾರೆ. ಈ ನಡುವೆ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 19ನೇ ಶತಕ ದಾಖಲಿಸಿದ ಬಾಬರ್, ಸೈಯದ್ ಅನ್ವರ್(20 ಶತಕ) ನಂತರದಲ್ಲಿ ಹೆಚ್ಚು ಏಕದಿನ ಶತಕಗಳನ್ನ ಬಾರಿಸಿರುವ ದಾಖಲೆ ಹೊಂದಿದ್ದಾರೆ.
ಇಫ್ತಿಕರ್ ಅಹ್ಮದ್:
ಮತ್ತೊಂದೆಡೆ ಇಫ್ತಿಕರ್ ಅಹ್ಮದ್ ಸಹ ಕೆಲವು ದಾಖಲೆ ಬರೆದಿದ್ದಾರೆ. ನೇಪಾಳ ವಿರುದ್ಧ 109* ರನ್‌ಗಳಿಸಿ ಶತಕದ ಸಂಭ್ರಮ ಆಚರಿಸಿಕೊಂಡ ಇಫ್ತಿಕರ್, ಆ ಮೂಲಕ ಏಷ್ಯಾಕಪ್ ODIಗಳಲ್ಲಿ 6 ಅಥವಾ ಅದಕ್ಕಿಂತ ಕೆಳ ಕ್ರಮಾಂಕದ ಬ್ಯಾಟರ್ ಗಳಿಸಿದ 3ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಕಲೆಹಾಕಿದ್ದಾರೆ. ಈ ಮೊದಲು ಶಾಹಿದ್ ಅಫ್ರಿದಿ, 2010ರಲ್ಲಿ ಬಾಂಗ್ಲಾದೇಶ ವಿರುದ್ಧ 124 ರನ್‌ಗಳಿಸಿದ್ದರೆ. ಅಲೋಕ್ ಕಪಾಲಿ, 2008ರಲ್ಲಿ ಭಾರತದ ವಿರುದ್ಧ 115 ರನ್‌ಗಳಿಸಿದ್ದರು.
ಅಲ್ಲದೇ ಬಾಬರ್ ಅಜಂ ಮತ್ತು ಇಫ್ತಿಕರ್ ಅಹ್ಮದ್ ಅವರ 214 ರನ್‌ಗಳ ಜೊತೆಯಾಟ ಏಷ್ಯಾಕಪ್ ODI ಇತಿಹಾಸದಲ್ಲಿ 3ನೇ ಗರಿಷ್ಠ ಜೊತೆಯಾಟ ಆಗಿದೆ. ಈ ಮೊದಲ ಮೊಹಮ್ಮದ್ ಹಫೀಜ್ ಮತ್ತು ನಾಸಿರ್ ಜಮ್ಶೆಡ್ 2012ರಲ್ಲಿ ಭಾರತದ ವಿರುದ್ಧ 224 ರನ್‌ಗಳ ಜೊತೆಯಾಟದ ದಾಖಲೆ ಹೊಂದಿದ್ದಾರೆ. ಜೊತೆಗೆ ಬಾಬರ್ ಅಜಂ ಮತ್ತು ಇಫ್ತಿಕರ್ ಅಹ್ಮದ್ ಅವರ ಜೊತೆಯಾಟ ಏಷ್ಯಾಕಪ್ ODI ಇತಿಹಾಸದಲ್ಲಿ 5ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ದಾಖಲಾದ ಉತ್ತಮ ಜೊತೆಯಾಟವಾಗಿದೆ.