ಬೆಂಗಳೂರು: ಮುದ್ದು ಮಕ್ಕಳು ಏನೇ ಮಾಡಿದ್ರೂ ಚಂದ. ಅದೇ ರೀತಿ ಪುಟ್ಟ ಕರುಗಳ ಚಿನ್ನಾಟ, ನಾಯಿಮರಿ, ಮೇಕೆ ಮರಿಗಳ ಆಟ, ಮುದ್ದಾಟ ಕಣ್ಣಿಗೆ ಹಬ್ಬದ ಜತೆಗೆ ಮನಸ್ಸಿಗೆ ಮುದ ಕೊಡುತ್ತದೆ. ಇಂತಹದ್ದೇ ಆನೆ ಮರಿಯೊಂದರ ನೀರಾಟದ ವಿಡಿಯೋ ನೋಡಿ ಮನಸೋಲದವರೇ ಇಂತಹ. ಟ್ವಿಟ್ಟರ್, ಫೇಸ್ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಜನ ಫಿದಾ ಆಗಿದ್ದಾರೆ. ಕಲ್ಯಾಣಿಯೊಂದರಲ್ಲಿ ನೀರು ಕುಡಿಯಲೆಂದು ಬಂದ ಪುಟಾಣಿ ಮರಿಯಾನೆಯೊಂದು ನೀರು ಕುಡಿಯುವುದನ್ನು ಮರೆತು ಆಟ ಆಡುತ್ತಾ ಎಂಜಾಯ್ ಮಾಡುತ್ತದೆ.
ಕಲ್ಯಾಣಿ ಬಳಿ ಬಂದ ಮರಿಯಾನೆ, ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತಾ ಹೋಗುತ್ತದೆ. ಮೆಟ್ಟಿಲುಗಳ ಲೆಕ್ಕಹಾಕಿದಂತೆ ಅತ್ತ ಇತ್ತ ನೋಡುತ್ತಾ ಪುಟ್ಟಪುಟ್ಟ ಹೆಜ್ಜೆ ಇಡೋದನ್ನ ನೋಡೋದೆ ಚೆಂದ. ವಿಡಿಯೋ ನೋಡಿದವರೆಲ್ಲಾ ಮತ್ತೆ ಮತ್ತೆ ನೋಡಿ ಖುಷಿ ತಡೆಯಾಗದೇ ಶೇರ್ ಮಾಡುತ್ತಿದ್ದಾರೆ. ಹೀಗಾಗಿ 49 ಸೆಕೆಂಡುಗಳ ವಿಡಿಯೋ ಲಕ್ಷಾಂತರ ಶೇರ್ ಕಂಡಿದ್ದು, ಕೋಟ್ಯಂತರ ಮಂಡಿ ವಿಡಿಯೋ ನೋಡಿ ಆನಂದಿಸಿದ್ದಾರೆ.
ಆನೆಗಳಿಗೆ ನೀರು ಎಂದರೆ ಪಂಚಪ್ರಾಣ. ನದಿ, ಕೆರೆಗಳು ಕಂಡರೆ ವಾರಗಟ್ಟಲೆ ಅಲ್ಲೇ ಬೀಡು ಬಿಡುತ್ತವೆ. ನೀರಲ್ಲಿ ಭರ್ಜರಿ ಜಲಕ್ರೀಡೆಯಾಡುವ ಆನೆಗಳು ಸಂತಾನೋತ್ಪತ್ತಿ ಕ್ರಿಯೆಯನ್ನು ಅಲ್ಲೇ ನಡೆಸುತ್ತವೆ.
ಒಟ್ಟಾರೆ ಒಂದು ವಿಡಿಯೋ ಎಷ್ಟೊಂದು ಕ್ರೇಜ್ ಹುಟ್ಟಿಸಬಹುದು ಎಂಬುದಕ್ಕೆ ಮರಿಯಾನೆಯ ನೀರಾಟ ಸಾಕ್ಷಿಯಾಗಿದೆ.