ತೆಂಕುತಿಟ್ಟು ಯಕ್ಷರಂಗದ ಭೀಷ್ಮ ಭಾಗವತ ಬಲಿಪ ನಾರಾಯಣ ನಿಧನಕ್ಕೆ ಮೋದಿ ಸಂತಾಪ…
ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ ಖ್ಯಾತರಾದ ಭಾಗವತರಾದ ಭಾಗವತ ಬಲಿಪ ನಾರಾಯಣ (86) ಗುರುವಾರ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಮೇರು ಭಾಗವತ ಬಳಲುತ್ತಿದ್ದರು. ಅವರು ಗುರುವಾರ ಮೂಡಬಿದಿರೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಯಕ್ಷಗಾನದಲ್ಲಿ ವಿಶೇಷ ಶೈಲಿಯ ಭಾಗವತಿಕೆಯಲ್ಲಿ ಬಲಿಪ ನಾರಾಯಣ ಹೆಸರುವಾಸಿಯಾಗಿದ್ದರು. ಅವರು ಬಲಿಪಜ್ಜ ಎಂದೇ ಖ್ಯಾತರಾಗಿದ್ದು, 1956ರಿಂದ 2003ರ ವರೆಗೆ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಲಿಪ ನಾರಾಯಣ ಭಾಗವತರು ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರು. ಸದ್ಯ ಮೂಡಬಿದಿರೆ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದರು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಹಲವು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿರುವ ಇವರು ಯಕ್ಷಗಾನದ ಹಲವು ಪ್ರಸಂಗಗಳನ್ನು ರಚಿಸಿ ಯಕ್ಷಗಾನ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದರು. ದೇವಿ ಮಾಹಾತ್ಮೆ, ಕಟೀಲು ಕ್ಷೇತ್ರ ಮಾಹಾತ್ಮೆ, ತೆಂಕು ತಿಟ್ಟಿನ ಎಲ್ಲಾ ಪೌರಾಣಿಕ ಪ್ರಸಂಗಳ ಭಾಗವತರಾಗಿದ್ದರು.
ಬಲಿಪ ನಾರಾಯಣಯರ ನಿಧನಕ್ಕೆ ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದಾರೆ. “ ಶ್ರೀ ಬಲಿಪ ನಾರಾಯಣ ಭಾಗವತರು ಸಾಂಸ್ಕೃತಿಕ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ಅವರು ಯಕ್ಷಗಾನ ಹಿನ್ನೆಲೆ ಗಾಯನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಮತ್ತು ಅವರ ಅನುಕರಣೀಯ ಶೈಲಿಯಿಂದ ಮೆಚ್ಚುಗೆ ಪಡೆದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬಕ್ಕೆ ಸಂತಾಪ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
Balipa Narayana : Modi condoles the death of Bhagwat Bhishma Balipa Narayana