Bangalore | ಭ್ರಷ್ಟಾಚಾರ ಹಾಗೂ ಬಿಜೆಪಿ ಒಂದೇ ನಾಣ್ಯದಲ್ಲಿರುವ ಎರಡು ಮುಖಗಳು
ಬೆಂಗಳೂರು : ಭ್ರಷ್ಟಾಚಾರ ಹಾಗೂ ಬಿಜೆಪಿ ಒಂದೇ ನಾಣ್ಯದಲ್ಲಿರುವ ಎರಡು ಮುಖಗಳು ಎಂದು ರಾಜ್ಯ ಕಾಂಗ್ರೆಸ್ ಕುಟುಕಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಭ್ರಷ್ಟಾಚಾರ ಹಾಗೂ ಬಿಜೆಪಿ ಒಂದೇ ನಾಣ್ಯದಲ್ಲಿರುವ ಎರಡು ಮುಖಗಳು, ಈ ಸರ್ಕಾರದಲ್ಲಿ ಹುಟ್ಟಿದರೂ ಲಂಚ, ಸತ್ತರೂ ಲಂಚ, ಉಸಿರಾಡಲೂ ಲಂಚ, ನಡೆದಾಡಲೂ ಲಂಚ ಕೊಡಬೇಕಾಗಿರುವ ಸ್ಥಿತಿ ಇದೆ. ವಿಧಾನಸೌಧದಿಂದ ಹಿಡಿದು ಗ್ರಾಮಪಂಚಾಯ್ತಿವರೆಗೂ ಲಂಚವೇ ಸರ್ವಸ್ವವಾಗಿದೆ.
ದುಡಿದು ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಯುವಸಮುದಾಯ ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿರುವುದು ಶೋಚನೀಯ. ಅಭ್ಯರ್ಥಿಗಳು “ಮೂರು ನಾಲ್ಕು ಅನ್ನ ಹಾಕು” ಎಂಬ ಉಚಿತ ಊಟಕ್ಕೆ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಆದರೆ 40 ಪರ್ಸೆಂಟ್ ಸರ್ಕಾರ “ಐದು ಆರು ಲಂಚ ತಾರೋ” ಎನ್ನುತ್ತಿದೆ! ಈ ಅಭ್ಯರ್ಥಿಗಳಿಗೆ ಉತ್ತರವೇನು ಬಸವರಾಜ ಬೊಮ್ಮಾಯಿ ಅವರೇ?
ನಾವು ಹಿಂದೂ ಪರ ಎಂದುಕೊಳ್ಳುವ ಬಿಜೆಪಿ ಹಿಂದುಗಳೂ ಸೇರಿದಂತೆ ಎಲ್ಲಾ ಜಾತಿ ಧರ್ಮದವರಿಗೂ ಅನ್ಯಾಯ ಮಾಡ್ತಿರೋದೇಕೆ? ಹಿಂದುಗಳೂ ಬಿಜೆಪಿಯ ಭ್ರಷ್ಟಾಚಾರದ ಸಂತ್ರಸ್ತರಾಗಿದ್ದಾರೆ, ಅಲ್ಲವೇ ಬಸವರಾಜ ಬೊಮ್ಮಾಯಿ ಅವರೇ? ಕೆಪಿಎಸ್ ಸಿ ಸೇರಿದಂತೆ ಎಲ್ಲಾ ಬಗೆಯ ಅಭ್ಯರ್ಥಿಗಳಿಗೆ ಸರ್ಕಾರ ದ್ರೋಹ ಮಾಡ್ತಿರೋದೇಕೆ?
2.4 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ, ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಇದೆ, ಆಡಳಿತ ಯಂತ್ರಕ್ಕೂ ತೊಡಕಾಗುತ್ತಿದೆ. ಹೀಗಿದ್ದೂ ಅಭ್ಯರ್ಥಿಗಳ ನೇಮಕಕ್ಕೆ ಹಿಂದೇಟು ಹಾಕ್ತಿರೋದೇಕೆ? ಲಂಚದ ಆಸೆಗಾಗಿಯೇ? ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸದೆ “ಎಜುಕೇಟೆಡ್ ಜಾಬ್ಲೆಸ್”ಗಳನ್ನು ಸೃಷ್ಟಿಸುತ್ತಿರುವುದೇಕೆ ?
ಉದ್ಯೋಗದ ಆಸೆಯಲ್ಲಿ ಓದುತ್ತಲೇ ಅರ್ಧ ಜೀವನ ಕಳೆದಿದ್ದಾರೆ ಅಭ್ಯರ್ಥಿಗಳು, ಕಳೆದ 3 ವರ್ಷದ ಬಿಜೆಪಿ ಆಡಳಿತದಲ್ಲಿ ಒಂದೂ ನೋಟಿಫಿಕೇಶನ್ ಆಗದಿರುವುದು ಈ ಸರ್ಕಾರದ ಅಸಾಮರ್ಥ್ಯವನ್ನು ತೋರಿಸುತ್ತದೆ. ನೇಮಕಾತಿ ಅಕ್ರಮಗಳು 40 ಪರ್ಸೆಂಟ್ ಸರ್ಕಾರದ ಭ್ರಷ್ಟತನಕ್ಕೆ ಸಾಕ್ಷಿಯಾಗುತ್ತವೆ. ಬಸವರಾಜ ಬೊಮ್ಮಾಯಿ ಅವರೇ, ಈ ಯುವಕರ ಪ್ರಶ್ನೆಗೆ ನಿಮ್ಮ ಉತ್ತರವೇನು?
ಲಂಚವಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ. ಬಿಜೆಪಿ ಸರ್ಕಾರ ಅಂದರೇನೇ ಲಂಚದ ಸರ್ಕಾರ. ಯಾವುದೇ ಕಾಮಗಾರಿ ಆದರೂ ನೀಡಬೇಕು 40% ಕಮಿಷನ್ ಯಾವುದೇ ಹುದ್ಧೆಗಾದರೂ ನೀಡಬೇಕು ಲಕ್ಷ-ಲಕ್ಷ ಲಂಚ. ಬಿಜೆಪಿ ಸರ್ಕಾರ ಎಂದರೆ 40 ಪರ್ಸೆಂಟ್ ಸರ್ಕಾರ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದೆ.