ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದ ಬೆನ್ನಲ್ಲೇ, ರಾಜಧಾನಿ ಬೆಂಗಳೂರಿಗೂ ವರುಣ ತನ್ನ ಪ್ರಕೋಪ ತೋರಿದ್ದಾನೆ.
ವಾಯುಭಾರ ಕುಸಿದ ಎಫೆಕ್ಟ್‍ನಿಂದ ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ಇಂದು(ಶುಕ್ರವಾರ) ಸಂಜೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಕೆರೆಯಂತಾಗಿ, ಕಾರು, ಬೈಕ್‍ಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ.
ಭಾರಿ ಮಳೆ ಅಬ್ಬರಕ್ಕೆ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಹೊಸಕೆರೆಹಳ್ಳಿ, ಬಸವನಗುಡಿ, ಮಾಗಡಿ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಅಕ್ಷರಶಃ ನದಿಗಳಂಂತಾಗಿದ್ದವು. ರಸ್ತೆಯಲ್ಲಿ ನಿಂತಿದ್ದ ನೂರಾರು, ಕಾರುಗಳು ಬೈಕ್‍ಗಳು ಮಳೆಯಲ್ಲಿ ಮುಳುಗಿದ್ದರೆ, ಬಸವನಗುಡಿ, ಹೊಸಕೆರೆಹಳ್ಳಿ, ಮಾಗಡಿ ರಸ್ತೆಯ ಮೇಲ್ಸೇತುವೆಗಳಲ್ಲಿ ಕಾರು-ಬೈಕ್‍ಗಳು ಕೊಚ್ಚಿಕೊಂಡು ಹೋಗಿವೆ.
ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆ ಅಬ್ಬರಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಸಕೆರೆಹಳ್ಳಿಯ ದತ್ತಾತ್ರೇಯ ಲೇಔಟ್‍ನಲ್ಲಿ ಮನೆಗಳಿಗೆ ಮಳೆನೀರು ನುಗ್ಗಿದೆ. ರಾಜಕಾಲುವೆ ಒಡೆದ ಪರಿಣಾಮ ಮನೆಗಳಿಗೆ ನೀರು ನುಗ್ಗಿದ್ದು, ಮನೆಗಳಿಂದ ಹೊರಬರಲು ಜನರು ಪರದಾಟ ನಡೆಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ತಮ್ಮನ್ನು ರಕ್ಷಣೆ ಮಾಡುವಂತೆ ಜನರು ಬಿಬಿಎಂಪಿಯನ್ನು ಮನವಿ ಮಾಡಿದ್ದಾರೆ.
ಆರ್.ಆರ್ ನಗರದ ರಸ್ತೆಗಳು ಕೆರೆಯಂತಾದರೆ, ಮೆಜೆಸ್ಟಿಕ್‍ನ ಓಕಳಿಪುರಂ ಅಂಡರ್ ಪಾಸ್‍ನಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತಿದ್ದರೆ, ಚಾಲುಕ್ಯ ಸರ್ಕಲ್ ಸಂಪೂರ್ಣ ಜಲಾವೃತಗೊಂಡಿದೆ. ರಾಜಕಾಲುವೆ ತುಂಬಿ ಹರಿಯುತ್ತಿರುವ ಕಾರಣ ಪ್ರಮೋದ್ ಲೇಔಟ್ ಅಪಾಯದ ಸುಳಿಗೆ ಸಿಲುಕಿದೆ.
ವಿವಿಪುರಂನಲ್ಲಿ ಮನೆ ಬಳಿ ಪಾರ್ಕಿಂಗ್ ಮಾಡಿದ್ದ ಬೈಕ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಬಸವನಗುಡಿಯ ಗವಿಗಂಗಾಧರ ಸ್ವಾಮಿ ದೇಗುಲದ ಬಳಿ ಕಾಂಪೌಂಡ್ ಕುಸಿದಿದೆ.
ಬೆಂಗಳೂರು ಮಾತ್ರವಲ್ಲದೆ ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಶನಿವಾರ ಹಾಗೂ ಭಾನುವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel