ಚಿಕ್ಕೋಡಿ: “ಬಸವಣ್ಣನವರು ಹಿಂದೂ ಸಮಾಜದ ಮೌಢ್ಯಗಳ ವಿರುದ್ಧ ಹೋರಾಡಿದ ಮಹಾನ್ ಕ್ರಾಂತಿಕಾರಿ, ಆದರೆ ಅವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿಲ್ಲ. ‘ಲಿಂಗಾಯತ ಧರ್ಮ’ ಎನ್ನುವುದು ಕೆಲವು ಕಂಪನಿಗಳು ಹುಟ್ಟುಹಾಕಿದ ಪರಿಕಲ್ಪನೆ,” ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯೊಂದಕ್ಕೆ ನಾಂದಿ ಹಾಡಿದ್ದಾರೆ.
ಜಾತಿಗಣತಿ, ಮೀಸಲಾತಿ ಮತ್ತು ಹಿಂದೂ ಧರ್ಮದ ಕುರಿತು ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೆ, ಲಿಂಗಾಯತ ಸಮುದಾಯಕ್ಕೆ ಮಹತ್ವದ ಕರೆಯೊಂದನ್ನು ನೀಡಿದರು.
ಜಾತಿಗಣತಿ ಹಿಂದೂ ಸಮಾಜವನ್ನು ವಿಭಜಿಸುವ ಷಡ್ಯಂತ್ರ
ರಾಜ್ಯ ಸರ್ಕಾರದ ಜಾತಿಗಣತಿ ಸಮೀಕ್ಷೆಯನ್ನು ಕಟುವಾಗಿ ಟೀಕಿಸಿದ ಯತ್ನಾಳ್, “ಈಗಾಗಲೇ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆಗಾಗಿ 400 ಕೋಟಿ ರೂಪಾಯಿಗಳನ್ನು ನೀರಿನಲ್ಲಿ ಹಾಕಿದೆ. ಈ ಗಣತಿಯ ಮೂಲಕ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಲಕ್ಷಣ ಕಾಣುತ್ತಿದೆ,” ಎಂದು ವ್ಯಂಗ್ಯವಾಡಿದರು.
“ಇದು ಕೇವಲ ಗಣತಿಯಲ್ಲ, ಹಿಂದೂ ಸಮಾಜವನ್ನು ವಿಭಜಿಸಲು ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತರು ರೂಪಿಸಿರುವ ವ್ಯವಸ್ಥಿತ ಸಂಚು. ಜಾತಿ ಕಾಲಂನಲ್ಲಿ ‘ಲಿಂಗಾಯತ ಕ್ರಿಶ್ಚಿಯನ್’, ‘ಕುರುಬ ಕ್ರಿಶ್ಚಿಯನ್’, ‘ವಾಲ್ಮೀಕಿ ಕ್ರಿಶ್ಚಿಯನ್’ ಎಂದು ನಮೂದಿಸುವ ಮೂಲಕ ಹಿಂದೂ ಧರ್ಮವನ್ನು ಒಡೆಯುವ ಷಡ್ಯಂತ್ರ ನಡೆಸಲಾಗುತ್ತಿದೆ. ಕಾಂಗ್ರೆಸ್ ವರಿಷ್ಠರೇ ಇದರ ಹಿಂದಿದ್ದು, ಇದಕ್ಕೆ ಯಾರೂ ಮನ್ನಣೆ ನೀಡಬಾರದು,” ಎಂದು ಗಂಭೀರ ಆರೋಪ ಮಾಡಿದರು.
ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದೇ ಬರೆಯಿರಿ: ಮೀಸಲಾತಿಗೆ ಯತ್ನಾಳ್ ಸೂತ್ರ
ಕೆಲವು ಮಠಾಧೀಶರು ‘ವೀರಶೈವ ಲಿಂಗಾಯತ’ ಎಂದು ಬರೆಸಲು ಹೇಳುತ್ತಿರುವುದನ್ನು ತೀವ್ರವಾಗಿ ವಿರೋಧಿಸಿದ ಯತ್ನಾಳ್, “ಕೇಂದ್ರ ಸರ್ಕಾರವು ‘ವೀರಶೈವ ಲಿಂಗಾಯತ’ವನ್ನು ಪ್ರತ್ಯೇಕ ಧರ್ಮವೆಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹಾಗಾಗಿ, ಆ ರೀತಿ ಬರೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೆಲವು ಮೂರ್ಖರು ಸಮುದಾಯವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ,” ಎಂದು ಕಿಡಿಕಾರಿದರು.
“ಮೀಸಲಾತಿ ಪಡೆಯಬೇಕಾದರೆ, ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಸ್ಪಷ್ಟವಾಗಿ ಬರೆಸಿ. ಜಾತಿಯ ಕಾಲಂನಲ್ಲಿ ‘ಲಿಂಗಾಯತ ಪಂಚಮಸಾಲಿ’ ಅಥವಾ ನಿಮ್ಮ ಉಪಜಾತಿಯನ್ನು ನಮೂದಿಸಿ. ‘ವೀರಶೈವ ಲಿಂಗಾಯತ’ ಎಂದು ಬರೆಸಿದರೆ 2A ಮೀಸಲಾತಿ ಸೌಲಭ್ಯ ಸಿಗುವುದಿಲ್ಲ. ಈಗಾಗಲೇ 2A ಮೀಸಲಾತಿಯಲ್ಲಿರುವ ಲಿಂಗಾಯತ ಉಪಜಾತಿಗಳು ‘ಹಿಂದೂ’ ಎಂದೇ ತಮ್ಮನ್ನು ಗುರುತಿಸಿಕೊಂಡಿವೆ,” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳ ದಮನ
ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಯತ್ನಾಳ್, “ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ. ಮುಸ್ಲಿಮರ ದೌರ್ಜನ್ಯಕ್ಕೆ ಸರ್ಕಾರದ ಕುಮ್ಮಕ್ಕಿದೆ. ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ, ಆಯಕಟ್ಟಿನ ಜಾಗಗಳಲ್ಲಿ ಒಂದು ಸಮುದಾಯದವರೇ ತುಂಬಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿಗಳಿಂದ ಜನರು ರೊಚ್ಚಿಗೆದ್ದಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾನು ಹಿಂದೂಗಳ ಪರವಾಗಿ ಗಟ್ಟಿಯಾಗಿ ನಿಂತಿರುವುದರಿಂದಲೇ ರಾಯಚೂರು, ಮದ್ದೂರಿನಂತಹ ಕಡೆ ಲಿಂಗಾಯತರನ್ನು ಹೊರತುಪಡಿಸಿ ಸಾವಿರಾರು ಹಿಂದೂಗಳು ನನ್ನನ್ನು ನೋಡಲು ಸೇರುತ್ತಾರೆ. ಇದು ಹಿಂದೂ ಸಮಾಜಕ್ಕೆ ಗಟ್ಟಿ ನಾಯಕತ್ವದ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ. ಆದರೆ ಕಾಂಗ್ರೆಸ್ ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತಿ ಹಿಂದೂಗಳನ್ನು ವಿಭಜಿಸಲು ನೋಡುತ್ತಿದೆ,” ಎಂದರು.
ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, “ಗುಡ್‌ನ್ಯೂಸ್‌ಗಾಗಿ ನಾನೆಂದೂ ಬಿಜೆಪಿ ಮನೆ ಬಾಗಿಲಿಗೆ ಹೋಗುವುದಿಲ್ಲ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಿ,” ಎಂದು ಗೂಢಾರ್ಥವಾಗಿ ನುಡಿದರು.







