ಬೆಂಗಳೂರು: ದೀಪದ ಹಬ್ಬ ದೀಪಾವಳಿಯ ಒಂದು ದಿನ ಮುಗಿದೇ ಹೋಯ್ತು. ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಸೋಂಕು ದೂರ ಇಡಲು ಹಾಗೂ ಉಸಿರಾಟದ ತೊಂದರೆ ಇರುವವರಿಗೆ ಕೊರೊನಾ ತೊಂದರೆ ಕೊಡಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಿ, ಕೇವಲ ಗ್ರೀನ್ ಹೊಡೀರಿ ಅಂತ ಹೇಳಿತು.
ಒಂದು ವಾರದ ಹಿಂದೆಯೇ ಪಟಾಕಿ ಬ್ಯಾನ್ ಆದೇಶ ಬಂದಿದ್ರೂ ಮಾತ್ರ ಗ್ರೀನ್ ಪಟಾಕಿಗಳು ಮಾರುಕಟ್ಟೆಗೆ ನಿರೀಕ್ಷೆ ಮಾಡಿದ ಮಟ್ಟಕ್ಕೆ ಬರಲೇ ಇಲ್ಲ. ಬಂದ ಪಟಾಕಿಗಳು ಜನರ ಜೇಬು ಸುಡುವಂತಿವೆ.

ಹಾಗಾದರೆ, ರಾಜಧಾನಿ ಬೆಂಗಳೂರು ಜನರು ದೀಪಾವಳಿ ಹಬ್ಬಕ್ಕೆ ಪಟಾಕಿಯನ್ನೇ ಹೊಡೆಯಲಿಲ್ವಾ..? ಹೊಡೆದ್ರೂ ಗ್ರೀನ್ ಪಟಾಕಿಯನ್ನೇ ಹೊಡೆದ್ರಾ…ಗ್ರೀನ್ ಪಟಾಕಿಗಳು ಸೌಂಡನ್ನೇ ಮಾಡಲಿಲ್ವಾ..? ಪಟಾಕಿ ಹೊಡೆದ ಮೇಲೆ ಹೊಗೆ ಜಾಸ್ತಿಯಾಗಿ ವಾಯು ಮಾಲಿನ್ಯ ಹೆಚ್ಚಾಗಲೇ ಇಲ್ವಾ ? ಇದರಿಂದ ಕೊರೊನಾ ಸೋಂಕಿತರಿಗೆ ಏನೂ ತೊಂದ್ರೆನೆ ಆಗಲಿಲ್ವಾ..?
ಈ ಪ್ರಶ್ನೆಗಳಿಗೆ ಉತ್ತರ ಕೇಳಿದ್ರೆ ಉತ್ತರ ಶೂನ್ಯ..ಜೀರೋ..
ಹಾಗಾದ್ರೆ ಬೆಂಗಳೂರಲ್ಲಿ ಏನಾಯ್ತು…?
ನಮ್ಮ ಜನ ರೋಡಿಗೆ ಬರಬೇಡಿ ಅಂದ್ರೆ ಬರ್ತಾರೆ, ಮಾರ್ಕೆಟ್‍ಗೆ ಬರಬೇಡಿ ಕೊರೊನಾ ಹರಡುತ್ತೆ ಅಂದ್ರೆ ಬಂದೇ ಬರ್ತಾರೆ, ಪಟಾಕಿ ಹೊಡೀಬೇಡಿ ಕೊರೊನಾ ಕೇಸ್ ಹೆಚ್ಚಾಗುತ್ತೆ ಅಂದ್ರೂ ಕೂಡ ರಾಜಧಾನಿ ಶನಿವಾರ ಸಂಜೆ ರಾಜ್ಯ ಸರ್ಕಾರದ ಆದೇಶ, ಉಪದೇಶವನ್ನು ಕಿವಿಗೆ ಹಾಕಿಕೊಂಡಂತೆ ಕಾಣಲೇ ಇಲ್ಲ.
ಸಂಜೆ 6 ಗಂಟೆ ಆಗೋವರೆಗೆ ಬೆಂಗಳೂರಿನ ಗಲ್ಲಿಗಳು ಸೈಲೆಂಟ್ ಆಗಿದ್ವು, ಆದ್ರೆ, ಸಂಜೆ 6 ಗಂಟೆ ಆಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಪಟಾಕಿ ಸದ್ದು ಏರುತ್ತಾ ಹೋಯ್ತು. 7 ಗಂಟೆಗೆ ನಂತರ ಪಟಾಕಿ ಭರಾಟೆ, ಬಾಂಬ್, ಸಿಡಿಮದ್ದುಗಳ ಅಬ್ಬರಕ್ಕೆ ಪಟಾಕಿ ಬ್ಯಾನ್ ಮಾಡಿದ ಸರ್ಕಾರ ಬಾಲ ಮುದುಡಿಕೊಂಡು ಮೂಲೆಲಿ ಕುಳಿತಂತೆ ಕಾಣ್ತಾ ಇತ್ತು.

ಸರ್ಕಾರದ ಆದೇಶವನ್ನು ಹರಿದು ಎಸೆದ ಬೆಂಗಳೂರಿನ ಬಹುತೇಕ ನಾಗರಿಕರು, ತಾವು ಮತ್ತು ತಮ್ಮ ಕುಟುಂಬ ಸದಸ್ಯರು, ಮಕ್ಕಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ವರ್ಷ ಬೆಂಗಳೂರು ಜನರು ಪಟಾಕಿ ಹೊಡೆಯಲ್ಲ ಎಂದು ಅದರ ಸಹವಾಸದಿಂದ ದೂರವೇ ಇದ್ದ ಜನರು ದಿಗಿಲು ಬೀಳುವಂತಾಯಿತು. ರಾತ್ರಿ 12 ಗಂಟೆ ಆದ್ರೂ ಕೂಡ ಬೆಂಗಳೂರು ನಗರದಲ್ಲಿ ಪಟಾಕಿಗಳ ಸದ್ದು ಮಾತ್ರ ನಿಲ್ಲಲೇ ಇಲ್ಲ.
ಹಾಗಾದ್ರೆ ಸರ್ಕಾರ, ಬಿಬಿಎಂಪಿ ಎಡವಿದ್ದೆಲ್ಲಿ..?
ಮಾಮೂಲಿ ಪಟಾಕಿ ಬ್ಯಾನ್ ಮಾಡಿದ ಸರ್ಕಾರ, ಬಿಬಿಎಂಪಿ ಹಾಗಾದ್ರೆ ಎಡವಿದ್ದೆಲ್ಲಿ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
1. ಸರ್ಕಾರವೇನು ಪಟಾಕಿಗಳನ್ನು ನಿಷೇಧ ಮಾಡಿದ್ರೂ ನಿಷೇಧಿತ ಪಟಾಕಿ ಮಾರುಕಟ್ಟೆಗೆ ಬಂದಾಗಿತ್ತು.
2. ಮಾರುಕಟ್ಟೆಗೆ ಬಂದ ಪಟಾಕಿಗಳನ್ನು ಜನರ ಕೈಗೆ ಸಿಗದಂತೆ ನೋಡಿಕೊಳ್ಳುವಲ್ಲಿ ಸರ್ಕಾರ ಹಾಗೂ ಬಿಬಿಎಂಪಿ ವಿಫಲ.
3. ಕೊರೊನಾ ಸೋಂಕಿನ ಅಬ್ಬರದ ನಡುವೆಯೂ ದೀಪಾವಳಿಗೆ ಜನರು ಪಟಾಕಿ ಹೊಡೆದೇ ಹೊಡೆಯುತ್ತಾರೆಂದು ಗೊತ್ತಿದ್ರೂ ಗ್ರೀನ್ ಪಟಾಕಿ ಹೊಡೆಯೋಕೆ ಆದೇಶ
ಕೊಟ್ಟಿತ್ತು.
4. ಸರ್ಕಾರ ಚಾಪೆ ಕೆಳಗೆ ತೂರಿದ್ರೆ, ನಮ್ಮ ರಂಗೋಲಿ ಕೆಳಗೆ ತೂರ್ತಾರೆ ಎಂಬುದು ಪಟಾಕಿ ವಿಚಾರದಲ್ಲಿ ಮತ್ತೆ ಸಾಬೀತಾಯ್ತು.
5. ಲಾಕ್‍ಡೌನ್ ವೇಳೆಯೂ ಪೊಲೀಸರು ಲಾಠಿ ಬೀಸಿದ್ರೂ ನಮ್ಮ ಜನ ಬೀದಿಗೆ ಬರೋದನ್ನ ನಿಲ್ಲಿಸಲೇ ಇಲ್ಲ.
6. ಕೊರೊನಾ ಸೋಂಕು ಹರಡುವುದು ಹೆಚ್ಚಾಗುತ್ತೆ, ಉಸಿರಾಟದ ತೊಂದರೆ ಇರುವವರಿಗೆ ಮಾರಕವಾಗುತ್ತೆ, ನಮ್ಮ-ನಿಮ್ಮ ಮನೆಯಲ್ಲಿರುವರಿಗೂ ಅಪಾಯ ಕಾದಿದೆ ಎಂದು ಸರ್ಕಾರ ತಿಳಿಸಿದ್ರೂ ಜನ ಆದೇಶವನ್ನು ಕಾಲಿನ ಕಸಕ್ಕೆ ಸಮ ಎಂಬಂತೆ ವರ್ತಿಸಿದ್ದಾರೆ.
7. ದೆಹಲಿಯಲ್ಲಿ ಗ್ರೀನ್ ಪಟಾಕಿ ಸೇರಿದಂತೆ ಯಾವುದೇ ಪಟಾಕಿಗಳನ್ನು ಹೊಡೆಯದಂತೆ, ಮಾರಾಟ ಮಾಡದಂತೆ ಸರ್ಕಾರ ಕಟ್ಟು ನಿಟ್ಟಿನ ಆದೇಶ ಮಾಡಿ ಹಲವರನ್ನು ಜೈಲಿಗೆ ಕಳಿಸಿದೆ.
8. ಆದ್ರೆ, ಕರ್ನಾಟಕದಲ್ಲಿ ಸಾಮಾನ್ಯ ಪಟಾಕಿ ನಿಷೇಧ ಮಾಡಿ, ಗ್ರೀನ್ ಪಟಾಕಿ ಎಂದು ಹೊಡೆಯೋಕೆ ಪರ್ಮಿಶನ್ ಕೊಟ್ಟಿದ್ದೇಕೆ ?
9. ಗ್ರೀನ್ ಪಟಾಕಿಯಲ್ಲಿ ಸಾಮಾನ್ಯ ಪಟಾಕಿಗಿಂತ ಶೇ.30ರಷ್ಟು ಮಾಲಿನ್ಯ ಕಡಿಮೆಯಾಗುತ್ತೆ, ಶಬ್ದ ಬರಲ್ಲ ಎಂದು ಸರ್ಕಾರ ಹೇಳಿದ್ರೂ ಆಗಿದ್ರೂ ಮಾತ್ರ ಉಲ್ಟಾ.
10. ನಿಷೇಧಿತ ಪಟಾಕಿ ಜನರ ಕೈಗೆ ಸಿಕ್ಕಿದ್ದು ಹೇಗೆ, ಮಾರಾಟಗಾರರನ್ನು ನಿಯಂತ್ರಣ ಮಾಡಲು ಸರ್ಕಾರ ಹಾಗೂ ಬಿಬಿಎಂಪಿ ವಿಫಲ ಕಂಡಿದ್ದೆಲ್ಲಿ..?
ಇಷ್ಟೆಲ್ಲಾ ಪ್ರಶ್ನೆಗಳೂ ಜನರು ಹಾಗೂ ಸರ್ಕಾರದ ಮುಂದೆ ಇದ್ದರೂ, ದೀಪಾವಳಿ ಹಬ್ಬ ಎಂದರೆ ಪಟಾಕಿ ಹೊಡೆಯಲೇಬೇಕು ಎಂಬ ನಮ್ಮ ಜನರ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವೇ ಇಲ್ಲ, ಮನೆ ಬಾಗಿಲಲ್ಲೇ ಹೆಮ್ಮಾರಿ ನಿಂತಿದ್ರೂ, ಬರಲಿ ನೋಡೋಣ ಎಂಬಂತಹ ಮನಸ್ಥಿತಿ ಶನಿವಾರದ ದೀಪಾವಳಿಯಂದು ಕಂಡು ಬಂದಿದಂತೂ ಸತ್ಯ.
ಒಟ್ಟಾರೆ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ರಾಜಧಾನಿ ಬೆಂಗಳೂರಿನ ಜನತೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಪಟಾಕಿ ಹೊಡೆದು ಖುಷಿ ಪಟ್ಟಿದ್ದಾರೆ. ಈ ಖುಷಿ ಎಷ್ಟು ದಿನ ಇರುತ್ತೆ ಎಂಬುದು ಕೆಲವೇ ದಿನಗಳಲ್ಲಿ ಅರಿವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








