ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಪುಂಡರು ಪುಂಡಾಟ ಮೆರೆದಿದ್ದು, ಈ ಗಲಭೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, “ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಮ್ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.
“ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತಿಳಿಸಿದ್ದೇನೆ. ಶಾಂತಿ ಸ್ಥಾಪನೆಯ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇದೆ”.
“ಇಂತಹ ಕೋಮು ಗಲಭೆಗಳಲ್ಲಿ ಸಾವು-ನೋವಿಗೆ ಈಡಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕೆಂದು ಕೋರುತ್ತೇನೆ”.
“ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಖಂಡನೀಯ. ಇದರಿಂದ ಪೊಲೀಸರು ನೈತಿಕ ಸ್ಥೈರ್ಯ ಕಳೆದು ಕೊಳ್ಳಬಾರದು. ಇಂತಹ ಪ್ರಕರಣಗಳ ಸಂದರ್ಭಗಳಲ್ಲಿ ಪೊಲೀಸರು ತಕ್ಷಣ ವಿವೇಚನೆಯಿಂದ ನಿರ್ಧಾರ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಸಣ್ಣ ನಿರ್ಲಕ್ಷ್ಯ ಅನಾಹುತಕ್ಕೆ ದಾರಿಮಾಡಿಕೊಡುತ್ತದೆ”.
“ಕಾವಲಭೈರಸಂದ್ರದಲ್ಲಿ ಗಲಭೆ ವರದಿ ಮಾಡಲು ಹೋಗಿರುವ ಮಾಧ್ಯಮ ಮಿತ್ರರ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡನೀಯ. ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಿ, ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು” ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.








