Betta Kuruba | ಎಸ್ ಟಿಗೆ ಬೆಟ್ಟದ ಕುರುಬ ಸಮುದಾಯ : ಈಶ್ವರಪ್ಪ ಹೇಳಿದ್ದೇನು ?
ಮೈಸೂರು : ಬೆಟ್ಟದ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಕೇಂದ್ರದ ತೀರ್ಮಾನವನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸ್ವಾಗತಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, 3 ದಶಕಗಳ ಹೋರಾಟ ಇದಾಗಿತ್ತು. ಸಮುದಾಯ ಮಠಾಧೀಶರಿಂದ ಎಸ್‌ಟಿಗೆ ಸೇರಿಸಬೇಕೆಂಬ ಹೋರಾಟ ನಡೆದಿತ್ತು. ಇದರಿಂದ ಗಡಿಭಾಗದ ಬಡವರಿಗೆ ಅನುಕೂಲ ಆಗುತ್ತೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇನ್ನೂ ಕುಲ ಶಾಸ್ತ್ರ ಅಧ್ಯಯನ ಮುಂದುವರಿದಿದೆ. ಅದರಲ್ಲಿ ಬರುವ ವರದಿ ಆಧರಿಸಿ ಬಡವರನ್ನು ಮೀಸಲಾತಿ ವರ್ಗಕ್ಕೆ ಸೇರಿಸಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲೂ ಶ್ರೀಮಂತರೇ ಮೀಸಲಾತಿ ಪಡೆಯುತ್ತಿದ್ದಾರೆ. ಕಡು ಬಡವರಿಗೆ ಮಾತ್ರ ಮೀಸಲಾತಿ ಸಿಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಮೂರು ದಶಕಗಳ ಹೋರಾಟ
ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳ ಕಾಡಂಚಿನ ಪ್ರದೇಶಗಳಲ್ಲಿ ವಾಸವಿರುವ ಬೆಟ್ಟ ಕುರುಬ ಸಮುದಾಯದ ಜನರನ್ನು ಇದುವರೆಗೆ ಜಾತಿ ಪ್ರಮಾಣ ಪತ್ರದಲ್ಲಿ ಕಾಡು ಕುರುಬ ಎಂದು ಉಲ್ಲೇಖಿಸಲಾಗಿತ್ತು. ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಜಾತಿಗಳ ಪಟ್ಟಿಗೆ ಬೆಟ್ಟ ಕುರುಬ ಜಾತಿಯನ್ನು ಸೇರ್ಪಡೆಗೊಳಿಸಬೇಕು ಎಂದು ಮೂರು ದಶಕಗಳಿಂದ ಸಮುದಾಯವರು ಹೋರಾಟ ನಡೆಸಿದ್ದರು.